Home ಜಿಲ್ಲೆ ಓದುವ ಹವ್ಯಾಸವೇ ಪತ್ರಕರ್ತನ ಆತ್ಮವಿಶ್ವಾಸ: ಹಂಪಿ ಕವಿವಿಯಲ್ಲಿ ಜರುಗಿದ ಕಾರ್ಯಾಗಾರದಲ್ಲಿ-ನರಸಿಂಹಮೂರ್ತಿ ಪ್ಯಾಟಿ ಹೇಳಿಕೆ

ಓದುವ ಹವ್ಯಾಸವೇ ಪತ್ರಕರ್ತನ ಆತ್ಮವಿಶ್ವಾಸ: ಹಂಪಿ ಕವಿವಿಯಲ್ಲಿ ಜರುಗಿದ ಕಾರ್ಯಾಗಾರದಲ್ಲಿ-ನರಸಿಂಹಮೂರ್ತಿ ಪ್ಯಾಟಿ ಹೇಳಿಕೆ

ಸಂಜೆವಾಣಿ ವಾರ್ತೆ

ಪತ್ರಕರ್ತರಿಗೆ ಎಲ್ಲ ವಿಷಯಗಳ ಸಂಪೂರ್ಣ ಜ್ಞಾನವಿರುವುದಿಲ್ಲ. ಆದರೆ ನಿರಂತರ ಅಧ್ಯಯನ, ಮಾಹಿತಿ ಸಂಗ್ರಹ ಮತ್ತು ಅನುಭವದ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಸೈದ್ಧಾಂತಿಕ ಅಧ್ಯಯನದ ಜೊತೆಗೆ ಪ್ರಾಯೋಗಿಕ ತರಬೇತಿಗೂ ಹೆಚ್ಚಿನ ಒತ್ತು ನೀಡಬೇಕು. ಓದುವ ಹವ್ಯಾಸ ಆತ್ಮವಿಶ್ವಾಸವನ್ನು ಬೆಳೆಸುವುದರೊಂದಿಗೆ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಪತ್ರಕರ್ತ ನರಸಿಂಹಮೂರ್ತಿ ಪ್ಯಾಟಿ ಅವರು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಪತ್ರಿಕಾ ದಿನಾಚರಣೆ-2026 ಅಂಗವಾಗಿ ಆಯೋಜಿಸಲಾಗಿದ್ದ ಮೂರು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿ, ಟೆಲಿವಿಷನ್ ವರದಿಗಾರಿಕೆಯ ತಂತ್ರಗಳು ವಿಷಯ ಕುರಿತು ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿಯನ್ನು ಪರಿಶೀಲಿಸದೆ ಪ್ರಕಟಿಸುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಪತ್ರಿಕೆಗಳು ಸುದ್ದಿಯನ್ನು ಪ್ರಕಟಿಸುವ  ಮೊದಲು ಅದರ ಸತ್ಯಾಸತ್ಯತೆಯನ್ನು ಸಮಗ್ರವಾಗಿ ಪರಿಶೀಲಿಸುತ್ತವೆ.

ಯಾರು ಭಾಷೆಯನ್ನು ಕಲಿತಿರುತ್ತಾರೋ, ಅವರು ಜಗತ್ತನ್ನು ಆಳುತ್ತಾರೆ. ಭಾಷೆಯ ಮೇಲಿನ ಹಿಡಿತ ಪತ್ರಕರ್ತನ ಪ್ರಮುಖ ಶಕ್ತಿಯಾಗಿದೆ. ಉತ್ತಮ ಸುದ್ದಿಗಳನ್ನು ಪಡೆಯಲು ಸಮಾಜದ ವಿವಿಧ ವರ್ಗಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವುದು ಅಗತ್ಯ. ಜೊತೆಗೆ ಮಾನವೀಯ ಸಂವೇದನೆ ಮತ್ತು ಭಾವನಾತ್ಮಕ ಸ್ಪಂದನೆ ಹೊಂದಿರುವ ಪತ್ರಕರ್ತರಿಂದಲೇ ಪರಿಣಾಮಕಾರಿ ಮತ್ತು ಅರ್ಥಪೂರ್ಣ ಸುದ್ದಿಗಳು ಮೂಡಿಬರುತ್ತವೆ. ಪತ್ರಕರ್ತರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಓದುಗರು ಅಥವಾ ವೀಕ್ಷಕರ ಮೇಲೆ ಹೇರದೆ, ವಾಸ್ತವಾಂಶಗಳನ್ನು ಮಾತ್ರ ಅವರ ಮುಂದಿಡಬೇಕು. ಸತ್ಯಾಂಶಗಳ ಆಧಾರದ ಮೇಲೆ ಜನರು ತಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಲು ಅವಕಾಶ ನೀಡುವುದು ಪತ್ರಕರ್ತನ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಹಿರಿಯ ಪತ್ರಕರ್ತರು ಅಪಾರ ಕೊಡುಗೆ ನೀಡಿದ್ದಾರೆ. ಹಾಗೆ ಪತ್ರಕರ್ತರು ಸುದ್ದಿ ಬರವಣಿಗೆಯಷ್ಟೇ ಅಲ್ಲದೆ, ಲೇಖನಗಳು, ಪ್ರವಾಸ ಕಥನಗಳು ಸೇರಿದಂತೆ ವಿವಿಧ ಪ್ರಕಾರದ ಬರಹಗಳ ಮೂಲಕ ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡುತ್ತಿದ್ದಾರೆ ಎಂದ ಅವರು, ಪತ್ರಿಕೋಧ್ಯಮದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಪತ್ರಕರ್ತರಾದಾಗ ಯಾವುದೇ ಆಮಿಷಗಳಿಗೆ ಒಳಗಾಗದೆ ಸತ್ಯ, ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಪಾಲಿಸಿಕೊಂಡು ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಬಡವರು, ಆದಿವಾಸಿಗಳು ಹಾಗೂ ಹಿಂದುಳಿದ ವರ್ಗದವರ ಸಮಸ್ಯೆಗಳನ್ನು ಬೆಳಕಿಗೆ ತಂದು ಅವರಿಗೆ ನ್ಯಾಯ ದೊರಕುವಂತೆ ಕಾರ್ಯನಿರ್ವಹಿಸುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಸೇರಿದಂತೆ ವೇದಿಕೆ ಮೇಲಿನ ಗಣ್ಯರು ಹಾಗೂ ಅತಿಥಿಗಳು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಎಸ್.ವೈ. ಸೋಮಶೇಖರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕ ಡಾ. ಎಸ್.ಕೆ. ಲೋಕೇಶ್ ಅವರು ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿ ಕವನ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕ ಡಾ.ಟಿ.ಎಸ್. ಗೊರವರ ಸೇರಿದಂತೆ ವಿವಿಧ ವಿಭಾಗಗಳ ಡೀನರು, ಅಧ್ಯಾಪಕರು ಹಾಗೂ ಮಾಹಿತಿ ಕೇಂದ್ರದ ಮುಖ್ಯಸ್ಥರು, ಆಡಳಿತ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.