Home ಜಿಲ್ಲೆ ಮೈಸೂರು ಅವೈಜ್ಞಾನಿಕ ಕಾಮಗಾರಿ: ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಒತ್ತಾಯ

ಅವೈಜ್ಞಾನಿಕ ಕಾಮಗಾರಿ: ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಒತ್ತಾಯ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.01
: ಪಟ್ಟಣ ವ್ಯಾಪ್ತಿಯ ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯ ಅಭಿವೃದ್ದಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಗುತ್ತಿಗೆದಾರ ಫುಟ್ ಪಾಥ್ ನಿರ್ಮಿಸುವ ಜಾಗದಲ್ಲಿ ಫುಟ್ ಪಾಥ್ ನಿರ್ಮಿಸುವ ಬದಲು ರಸ್ತೆ ಬದಿ ವ್ಯಾಪಾರಿಗಳಿಗೆ ಅನುಕೂಲವಾಗವಂತೆ ಜಾಗಬಿಟ್ಟು ರಸ್ತೆಯಲ್ಲಿಯೇ ಫುಟ್ ಪಾಥ್ ನಿರ್ಮಾಣ ಮಾಡುತ್ತಿದ್ದು ಪಾದಚಾರಿಗಳು ರಸ್ತೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.


ಪಟ್ಟಣ ವ್ಯಾಪ್ತಿಯಲ್ಲಿ ಹಾದುಹೋಗಿರುವ ಮೈಸೂರು-ಚನ್ನರಾಯಪಟ್ಟಣ ಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಅತೀವವಾದ ಸಂಚಾರಿ ಒತ್ತಡವಿದೆ. ಪಟ್ಟಣದ ಎ.ಪಿ.ಎಂ.ಸಿ ಮಾರುಕಟ್ಟೆ, ಎಲ್.ಐ.ಸಿ ಕಟ್ಟಡ, ಖಾಸಗಿ ಆಸ್ಪತ್ರೆ, ಚಿತ್ರಮಂದಿರ, ದಲಿತ ವಿದ್ಯಾರ್ಥಿ ನಿಲಯ, ಪ್ರವಾಸಿ ಮಂದಿರ, ಲೋಕೋಪಯೋಗಿ ಇಲಾಖೆ, ತಾಲೂಕು ಪಂಚಾಯತಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಗಳು, ಮೀನುಗಾರಿಕಾ ಇಲಾಖೆ, ಮನ್ ಮುಲ್ ಉಪ ಕಛೇರಿ, ಆಶೀರ್ವಾದ ಶಾಲೆ, ಸರ್ಕಾರಿ ಇಂಜಿನಿಯರಿಂಗ್ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು, ನ್ಯಾಯಾಲಯ ಸಂರ್ಕೀಣ ಸೇರಿದಂತೆ ಹತ್ತು ಹಲವು ಸಾರ್ವಜನಿಕ ಸಂಪರ್ಕ ಕೇಂದ್ರಗಳು ಮತ್ತು ಪ್ರಮುಖ ವ್ಯಾಪಾರ ಕೇಂದ್ರಗಳು ಈ ರಸ್ತೆಯ ಎರಡೂ ಬದಿಗಳಲ್ಲಿವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಐ.ಟಿ.ಐ ಕಾಲೇಜು, ಪೆÇಲೀಸ್ ಠಾಣೆ ಸೇರಿದಂತೆ ಹತ್ತು ಹಲವು ಕಡೆ ಹೋಗಬೇಕಾದ ಸಾವಿರಾರು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇಲ್ಲಿನ ಪ್ರವಾಸಿ ಮಂದಿರ ವೃತ್ತದ ಮೂಲಕವೇ ಹಾದುಹೋಗಬೇಕು. ಸದರಿ ರಸ್ತೆಯ ಮೇಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸದುದ್ದೇಶದಿಂದ ರಾಜ್ಯ ಸರ್ಕಾರ ಸದರಿ ರಸ್ತೆಯನ್ನು ಅಗಲೀಕರಣ ಮಾಡಿ ರಸ್ತೆಯ ಎರಡೂ ಬದಿಯಲ್ಲಿಯೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಫುಟ್ ಪಾಥ್ ನಿರ್ಮಿಸಿ ಡಿವೈಡರ್ ನಿರ್ಮಿಸುವಂತೆ ರಸ್ತೆ ಅಭಿವೃದ್ದಿಪಡಿಸಲು 4.5 ಕೋಟಿ ಅನುದಾನ ನೀಡಿದೆ. ಸದರಿ ಅನುದಾನವನ್ನು ಬಳಕೆ ಮಾಡಿ ಪಟ್ಟಣದ ಹೊರವಲಯದ ಕಾಗುಂಡಿ ಹಳ್ಳದಿಂದ ನ್ಯಾಯಾಲಯ ಸಂಕೀರ್ಣದವರೆಗೆ ಒಟ್ಟು 1.4 ಕಿ.ಮೀ ರಸ್ತೆ ಅಭಿವೃದ್ದಿ ಮಾಡಬೇಕು. ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಶಾಸಕ ಹೆಚ್.ಟಿ.ಮಂಜು ಉದ್ಘಾಟನೆ ಮಾಡಿದ್ದು ನಾಗಮಂಗಲ ಮೂಲದ ಗುತ್ತಿಗೆದಾರ ಸದರಿ ಕಾಮಗಾರಿಯನ್ನು ನಿರ್ವಹಿಸುತ್ತಿದ್ದು


ನಿಯಮಾನುಸಾರ ರಸ್ತೆ ಅಭಿವೃದ್ದಿ ಮಾಡಬೇಕಾದ ಗುತ್ತಿಗೆದಾರ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳದೆ ಹಾಲಿ ಇರುವ ರಸ್ತೆಯ ಮೇಲೆ ಡಾಂಬರು ಹಾಕಿ ರಸ್ತೆಗೆ ಸೇರಿದ ಜಾಗದಲ್ಲಿಯೇ ಎರಡೂ ಬದಿಗಳಲ್ಲಿ ಫುಟ್ ಪಾಥ್ ನಿರ್ಮಿಸಿ ಜನರ ಸುಗಮ ಸಂಚಾರಕ್ಕೆ ಸ್ಥಳವೇ ಇಲ್ಲದಂತೆ ಮಾಡಿದ್ದಾನೆ. ರಸ್ತೆಯ ಎರಡೂ ಬದಿಗಳಲ್ಲಿ ಪಾದಚಾರಿ ರಸ್ತೆ ನಿರ್ಮಿಸುವ ಬದಲು ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಜಾಗಬಿಟ್ಟು ರಸ್ತೆಯ ಎರಡೂ ಬದಿಗಳಲ್ಲಿಯೂ ಕಟ್ಟೆ ಕಟ್ಟಿದ್ದಾನೆ. ಇದರ ಲಾಭ ಪಡೆದ ಫುಟ್ ಪಾಥ್ ವ್ಯಾಪಾರಿಗಳು ತಮ್ಮ ವ್ಯಾಪಾರದ ಅಂಗಡಿಗಳನ್ನು ಹೊಸದಾಗಿ ನಿರ್ಮಿಸಿರುವ ಫುಟ್ ಪಾಥ್ ಗೂ ವಿಸ್ತರಿಸಿಕೊಂಡಿದ್ದು ಈಗ ಜನ ಸಂಚಾರವಿರಲಿ ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಯಾಗಿದೆ. ತಮ್ಮ ಕಾಲೇಜು ಕ್ಯಾಂಪಸ್ ಮುಂಭಾಗದ ರಸ್ತೆಯಲ್ಲಿ ಫುಟ್ ಪಾಥ್ ಅಂಗಡಿಗಳು ತಲೆಯೆತ್ತಿರುವುದರಿಂದ ಮಕ್ಕಳ ಶೈಕ್ಷಣಿಕ ಚಟಿವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ದಯಮಾಡಿ ನಮ್ಮ ಕ್ಯಾಂಪಸ್ ಮುಂದಿನ ಫುಟ್ ಪಾಥ್ ಅಂಗಡಿಗಳನ್ನು ತೆರವುಗೊಳಿಸಿ ಎಂದು ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಪುರಸಭೆ, ಪಟ್ಟಣ ಪೆÇಲೀಸ್ ಠಾಣೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಸರ್ಕಾರಿ ಆಡಳಿತ ಮಾತ್ರ ನಿಷ್ಕ್ರಿಯವಾಗಿದೆ
ಪಟ್ಟಣದ ಎಲ್ಲಾ ಪ್ರಮುಖ ರಸ್ತೆಗಳು ಫುಟ್ ಪಾಥ್ ವ್ಯಾಪಾರಿಗಳಿಂದ ತುಂಬಿ ತುಳುಕುತ್ತಿದ್ದು ಯಾರೊಬ್ಬರೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಕ್ರಮ ವಹಿಸುತ್ತಿಲ್ಲ. ಸಾರ್ವಜನಿಕರು ಮತ್ತು ಪಟ್ಟಣಕ್ಕೆ ನಿತ್ಯ ಕಲಿಕೆಗೆ ಆಗಮಿಸುವ ಸಾವಿರಾರು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ನಿತ್ಯ ಒಂದಲ್ಲ ಒಂದು ಅವಘಡಗಳು ಉಂಟಾಗುತ್ತಿವೆ. ಸಾರ್ವಜನಿಕರ ಹಿತದೃಷ್ಠಿಯಿಂದ ಅಧಿಕಾರಿಗಳು ತಕ್ಷಣವೇ ಫುಟ್‍ಪಾಥ್ ತೆರವುಗೊಳಿಸಬೇಕು. ಅವೈಜ್ಞಾನಿಕ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನ ವಿರುದ್ದ ಕ್ರಮ ಜರುಗಿಸಿ ನಿಯಮಾನುಸಾರ ರಸ್ತೆ ಅಭಿವೃದ್ದಿಪಡಿಸುವಂತೆ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಆಗ್ರಹಿಸಿದ್ದಾರೆ.