
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.16: ನಗರದ ಸಿರುಗುಪ್ಪ ರಸ್ತೆಯ ಅವಂಬಾವಿಯ ದೇವಸ್ಥಾನದ ಹಿಂಭಾಗದಲ್ಲಿ ಒತ್ತುವರಿ ಮಾಡಿ ಕಾಂಪೌಂಡ್ ಕಟ್ಟಿದ್ದ ರಸ್ತೆ ಸೇರಿದಂತೆ ಸರ್ಕಾರದ 22 ಸೇಂಟ್ ನಿವೇಶನವನ್ನು ಇಂದು ಜಿಲ್ಲಾಡಳಿತ ತೆರವುಗೊಳಿಸಿದೆ.
ಎಡಿಸಿ ಮಹಮ್ಮದ್ ಝುಬೇರ್ ಮತ್ತು ಎಸಿ ರಾಜೇಶ್, ಎಡಿಎಲ್ ಆರ್ ಬಳ್ಳಾರಪ್ಪ ಮೊದಲಾದವರನ್ನು ಒಳಗೊಂಡ ತಂಡ ಇಂದು ಬೆಳಿಗ್ಗೆ ನಗರದ ಸರ್ವೇ ನಂ 266 ಎ/2 ಹಾಗು 274/1 ಗೆ ಸೇರಿದ 22 ಸೇಂಟ್ಸ್ ನಿವೇಶನ ತೆರವುಗೊಳಿಸಿ ಇದು ಸರ್ಕಾರಕ್ಕೆ ಸೇರಿದ್ದು ಎಂದು ಫಲಕ ಹಾಕಲಾಯ್ತು.
ಈ ನಿವೇಶನಕ್ಕೆ ಸುತ್ತಲೂ ಎತ್ತರದ ಕಾಂಪೌಂಡ್ ಕಟ್ಟಿ ಗೇಟು ಅಳವಡಿಸಲಾಗಿತ್ತು. ಎರೆಡು ಜೆಸಿಬಿಗಳಿಂದ ಪೊಲೀಸ್ ಬಂದೋಬಸ್ತಿನಲ್ಲಿ ಡೆಮಾಲಿಶ್ ಮಾಡಲಾಯ್ತು. ಈ ವೇಳೆ ಯಾರೂ ಇದು ತಮಗೆ ಸೇರಿದ್ದು ಎಂದು ಬರಲಿಲ್ಲ.
ದೇವಸ್ಥಾನದ ಆಡಳಿತ ಮಂಡಳಿಯ ಕೆಲವರು ಇಲ್ಲಿ ಕಲ್ಯಾಣ ಮಂಟಪ ಕಟ್ಟಲು ಯೋಜನೆ ಇತ್ತು ಎಂದು ಎಡಿಸಿಯವರಿಗೆ ಹೇಳಿದರಂತೆ. ಆದರೆ ಆ ಬಗ್ಗೆ ಏನೂ ದಾಖಲೆ ನೀಡದ ಕಾರಣ ತೆರವುಗೊಳಿಸಲಾಯ್ತು.
ಇದರ ಸುತ್ತಮುತ್ತ ಕಟ್ಟಿಕೊಂಡಿರುವ 56 ಮನೆಗಳು ಸಹ ಸರ್ಕಾರಿ ನಿವೇಶನ ಒತ್ತುವರಿ ಮಾಡಿಕೊಂಡು ಕಟ್ಟಿರುವುಗಳೇ ಆಗಿವೆ. ಆದರೆ ಅವು ನಿವಾಸಗಳಾಗಿರುವುದರಿಂದ ಅವರು ಬಿ ಖಾತಾದಲ್ಲಿ ಹಕ್ಕು ಪತ್ರಪಡೆಯಬಹುದಾಗಿದೆ ಎನ್ನಲಾಗುತ್ತಿದೆ.
ಈಗ ವಶಪಡಿಸಿಕೊಂಡಿರುವ ಸ್ಥಳ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವುದರಿಂದ ಸಾರ್ವಜನಿಕರ ಬಳಕೆಗೆ ಉದ್ಯಾನವನ ಇಲ್ಲವೇ ಇನ್ನಿತರೇ ಸೌಲಭ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ..






















