
ಸಂಜೆವಾಣಿ ವಾರ್ತೆ
ನಂಜನಗೂಡು : ಜೂ.09:- ನಂಜನಗೂಡು ತಾಲೂಕು ಕಚೇರಿಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ.ಹಣಬಾಕ ಅಧಿಕಾರಿಗಳ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ. ಬಾರ್ಕೋಲ್ ಚಳುವಳಿ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ಸಿಂಧುವಳ್ಳಿ ಸತೀಶ್ ಇಮ್ಮಾವು ರಘು ಮತ್ತು ತಾಲೂಕು ಅಧ್ಯಕ್ಷ ಸೂರಳ್ಳಿ ಮಹಾದೇವ ನಾಯಕ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ಬಾರ್ ಕೋಲ್ ಚಳುವಳಿಯಲ್ಲಿ ನೂರಾರು ರೈತರು ಭಾಗಿಯಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಂಜನಗೂಡು ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಬಾರ್ ಕೋಲ್ ಚಳುವಳಿ ಎಂ ಜಿ ರಸ್ತೆಯ ಮೂಲಕ ಮಿನಿವಿಧಾನಸೌಧ ಕಚೇರಿಗೆ ಆಗಮಿಸಿದೆ. ದಾರಿಯುವುದಕ್ಕೂ ಕಂದಾಯ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ. ರೈತರು ಕೃಷಿ ಭೂಮಿಗೆ ಸಂಬಂಧಿಸಿದಂತೆ ಕೆಲಸ ಕಾರ್ಯ ನಡೆಯಬೇಕಾದರೆ ಲಂಚದ ಹಣ ನೀಡಲೇಬೇಕು.
ಜಮೀನಿನ ದಾಖಲಾತಿಗಳು, ವಂಶವೃಕ್ಷ, ಜನನ ಮತ್ತು ಮರಣ ದೃಢೀಕರಣ ಕೃಷಿ ಭೂಮಿಯ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ತಹಸೀಲ್ದಾರ್ ಕಚೇರಿಯಲ್ಲಿ ಲಂಚದ ಹಣ ನೀಡದಿದ್ದರೆ ಕೆಲಸ ನಡೆಯಲ್ಲ ಎಂದು ಆರೋಪಿಸಿದ್ದಾರೆ.
ಕಂದಾಯ ಅಧಿಕಾರಿಗಳ ಹಣ ದಾಹಕ್ಕೆ ಬೇಸತ್ತ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ನಂಜನಗೂಡಿಗೆ ನೂತನ ತಹಸೀಲ್ದಾರ್ ಡಾ. ಸ್ಮಿತಾ ರಾಮು ಅಧಿಕಾರ ಪಡೆದು ಆರು ತಿಂಗಳು ಕಳೆದಿದೆ.ರೈತರು ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅವರ ಸಿಬ್ಬಂದಿಗಳು ಮಾಡುವುದಿಲ್ಲ.ಕೂಡಲೇ ನಂಜನಗೂಡಿನ ಕಂದಾಯ ಇಲಾಖೆ ಶುದ್ಧವಾಗಬೇಕು.ರೈತರ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಬೇಕಿದ್ದರೆ ಸಾಕಷ್ಟು ವರ್ಷಗಳಿಂದ ಜಾಂಡ ಹೂಡಿರುವ ಅಧಿಕಾರಿಗಳು ಎತ್ತಂಗಡಿ ಆಗಬೇಕು.ಆರ್ ಐ ಮತ್ತು ವಿಎಗಳು ಹತ್ತಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಿ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮೈಸೂರು ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರು ಆಗಮಿಸಬೇಕು
ನಂಜನಗೂಡಿನ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಕಳಂಕ ತರುತ್ತಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ನಂಜನಗೂಡು ಕ್ಷೇತ್ರದ ಜನರ ಸೇವೆ ಮಾಡಲು ಬಂದ ಅಧಿಕಾರಿಗಳು ರೈತರನ್ನು ಸುಲಿಗೆ ಮಾಡಿ ಅಕ್ರಮವಾಗಿ ಆಸ್ತಿ ಮತ್ತು ತೋಟ ಮಾಡಿದ್ದಾರೆ ಇಂತಹ ಅಧಿಕಾರಿಗಳನ್ನು ಗುರುತಿಸಿ ತಾಲೂಕಿನಿಂದ ಹೊರಗಟ್ಟಬೇಕು ಎಂದು ಆಗ್ರಹಿಸಿದರು.
























