
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.10- ಜಿಲ್ಲೆಯಲ್ಲಿ ಹೈನುಗಾರಿಕೆಯಿಂದ ಗ್ರಾಮಾಂತರ ಪ್ರದೇಶದ ರೈತರು ಅಭಿವೃದ್ದಿ ಹೊಂದಿದ್ದು, ಹೈನುಗಾರಿಕೆಯಲ್ಲಿ ಚಾಮುಲ್ ಕ್ರಾಂತಿ ಮಾಡುತ್ತಿದೆ. ಪ್ರತಿ ದಿನ 3 ಲಕ್ಷ ಲೀಟರ್‍ಗೂ ಹೆಚ್ಚು ಹಾಲು ಸಂಗ್ರಹಣೆಯಾಗುತ್ತಿದೆ ಎಂದು ಚಾಮುಲ್ ನಿರ್ದೇಶಕರು ಆದ ವೆಂಕಟಯ್ಯನಛತ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್. ಬಸವರಾಜು ತಿಳಿಸಿದರು.
ಗ್ರಾಮದ ಡೇರಿ ಸಭಾಂಗಣದಲ್ಲಿ ವೆಂಕಟಯ್ಯನಛತ್ರ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು 1978ರಲ್ಲಿ ಸ್ಥಾಪನೆಗೊಂಡು ಈ ಭಾಗದ ರೈತರ ಅಭಿವೃದ್ದಿಗೆ ಕಳೆದ 48 ವರ್ಷಗಳಿಂದ ದುಡಿಯುತ್ತಿದೆ. ಈ ವರ್ಷದ 3.28 ಕೋಟಿ ರೂಗಳ ಹಾಲು ಮಾರಾಟ ಮಾಡಿ, ಉತ್ತಮ ವಹಿವಾಟು ನಡೆಸಿ, 9,94,782 ರೂ.ಗಳ ನಿವ್ವಳ ಲಾಭವನ್ನು ಪಡೆದುಕೊಂಡಿದೆ. ಇದರಲ್ಲಿ ಹಾಲು ಉತ್ಪಾದಕ ರೈತರಿಗೆ 4,50,849 ರೂ.ಗಳ ಬೋನಸ್ ಅನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಂಘದ ಆಡಳಿತ ಮಂಡಲಿಯ ಉತ್ತಮ ನಿರ್ವಹಣೆ ಮತ್ತು ನೌಕರರ ಶ್ರಮದ ಜೊತೆಗೆ ಸದಸ್ಯರು ಗುಣಮಟ್ಟದ ಹಾಲು ಸರಬರಾಜು ಮಾಡುತ್ತಿರುವ ಕಾರಣದಿಂದ ನಮ್ಮ ಡೇರಿ ಲಾಭ ಬರಲು ಕಾರಣವಾಗಿದೆ.
ಅಲ್ಲದೇ ಸಂಘದಿಂದ ಈಗಾಗಲೇ ಉಚಿತವಾಗಿ ಕ್ಯಾಲೆಂಡರ್ ಪ್ರಕಟಣೆÉ, ಜಾನುವಾರುಗಳು ನಿತ್ರಾಣಗೊಂಡ ನಂತರ ಆರೈಕೆ ಮಾಡುವುದು ಕಷ್ಟವಾಗುತಿತ್ತು. ಈ ಹಿನ್ನೆಲೆಯಲ್ಲಿ ಡೇರಿಯಿಂದಲೇ ಹಸು ಎತ್ತುವ ಯಂತ್ರವನ್ನು ಖರೀದಿ ಮಾಡಿ ಅದನ್ನು ರಿಯಾಯಿತಿ ದರದ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದೆ. ಪ್ರತಿ ದಿನ ನೂರು ರೂ. ನಂತೆ ಬಾಡಿಗೆ ನಿಗಧಿ ಮಾಡಲಾಗುತ್ತಿದ್ದು, ಸದಸ್ಯರ ತೀರ್ಮಾನದಂತೆ ಸಂಘದ ಸದಸ್ಯರಿಗೆ 50 ರೂ. ಬಾಡಿಗೆ ಹಾಗೂ ಇತರರಿಗೆ 100 ರೂ. ಬಾಡಿಗೆಯನ್ನು ನಿಗಧಿ ಮಾಡಲಾಗಿದೆ ಎಂದು ಬಸವರಾಜು ತಿಳಿಸಿದರು.
ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿಯೇ ವರ್ಷದ ಪ್ರಥಮ ವಾರ್ಷಿಕ ಮಹಾಸಭೆಯನ್ನು ಜೂನ್ ತಿಂಗಳಲ್ಲಿ ಮಾಡುವ ಮೂಲಕ ಸಂಘ ದಾಖಲೆಯನ್ನು ಮಾಡುತ್ತಿದೆ. ಇತರೇ ಸಂಘಗಳು ಸಹ ಸೆಪ್ಟೆಂಬರ್‍ವರೆಗೆ ಕಾಯದೇ ಆರ್ಥಿಕ ವರ್ಷ ಪೂರ್ಣವಾಗುತ್ತಿದ್ದಂತೆ ವಾರ್ಷಿಕ ಸಭೆಗಳನ್ನು ನಡೆಸಿದರೆ ಸಂಘಗಳಲ್ಲಿ ಇನ್ನು ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತಮ ಆಡಳಿತ ನಿರ್ವಹನೆ ಮಾಡಲು ಸಾಧ್ಯವಾಗುತ್ತದೆ. ವೆಂಕಟಯ್ಯನಛತ್ರ ಡೇರಿ ಇದಕ್ಕೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರೈತರು ರಾಸುಗಳನ್ನು ತಮ್ಮ ಮಕ್ಕಳಂತೆ ಜೋಪಾನ ಮಾಡಬೇಕು. ರಾಸುಗಳ ವಿಮೆ ಮಾಡಿಸಿದ ಬಳಿಕ ಅವುಗಳ ಆರೈಕೆಯು ಮುಖ್ಯವಾಗಿರುತ್ತದೆ. ರಾಸುಗಳ ಕಿವಿಗೆ ಹಾಕಿರುವ ಓಲೆಯನ್ನು ಕಳೆದುಕೊಳ್ಳದಂತೆ ಜೋಪಾನ ಮಾಡಬೇಕು. ಒಂದು ವೇಳೆ ಓಲೆ ಬಿದ್ದು ಹೋದರೆ, ಅದನ್ನು ತಕ್ಷಣ ಡೇರಿಯವರಿಗೆ ತಿಳಿಸಿ ಹಾಕಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಇದರಿಂದ ರಾಸು ಮರಣ ಹೊಂದಿದಾಗ ವಿಮೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂಘಕ್ಕೆ ಹೆಚ್ಚು ಹಾಲು ನೀಡಿದ ರೈತರಾದ ಎಚ್.ಎಸ್. ಮಲ್ಲು, ಎ.ಎನ್. ಮಹೇಶ್, ಶಿವರಾಜು ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಕ ಪಿ. ಪುನೀತ್‍ಕುಮಾರ್ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು.
ಸಭೆಯಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ಚಾಮುಲ್ ಸಹಾಯಕ ವಿಸ್ತಾರಣಾಧಿಕಾರಿ ಭಾಗ್ಯರಾಜ್, ನಿರ್ದೇಶಕರಾದ ಶಿವರಾಜು, ಕೃಷ್ಣಗೌಡ, ಮಹದೇವಸ್ವಾಮಿ ಎಸ್, ಬಿ.ಎನ್. ನಾಗರಾಜು, ಸಿ. ಸಂಪತ್‍ಕುಮಾರ್, ಬಂಗಾರು, ಮಹದೇವಸ್ವಾಮಿ, ಮಹದೇವಯ್ಯ, ಎ.ಬಿ. ರೇಣುಕಾ, ಭಾಗ್ಯಮ್ಮ, ಡೇರಿ ಕಾರ್ಯನಿರ್ವಾಹಕ ಪುನೀತ್‍ಕುಮಾರ್ ಸಿಬ್ಬಂದಿಗಳಾದ ಮನೋಹರ, ಮನು, ಸುನಂದ, ಮನು ಹಾಗೂ ಹಾಲು ಉತ್ಪಾದಕರ ರೈತ ಸದಸ್ಯರು ಉಪಸ್ಥಿತರಿದ್ದರು.





























