Home ಜಿಲ್ಲೆ ಬೆಂಗಳೂರು ಎಸ್.ಐ.ಆರ್ ಬಗ್ಗೆ ಜಾಗೃತಿ ಮೂಡಿಸಲು ಟಿ.ಕೆ ರಮೇಶ್ ಕರೆ

ಎಸ್.ಐ.ಆರ್ ಬಗ್ಗೆ ಜಾಗೃತಿ ಮೂಡಿಸಲು ಟಿ.ಕೆ ರಮೇಶ್ ಕರೆ

ಕೋಲಾರ, ಜೂ,10-ಅರ್ಹ ನಾಗರಿಕರೆಲ್ಲರಿಗೂ ಮತದಾನದ ಹಕ್ಕು ಸಿಗುವಂತೆ ಮಾಡಲು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ವ್ಯಾಪಕವಾಗಿ ಪ್ರಾಚಾರ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಟಿ.ಕೆ ರಮೇಶ್ ತಿಳಿಸಿದರು.


ಜಿಲ್ಲಾ ಪಂಚಾಯತಿ ಸಭಾಗಂಣದಲ್ಲಿ ಹಮ್ಮಿಕೊಂಡಿದ್ದ ಎಸ್.ಐ.ಆರ್ ಸಂಬಂಧ ಸ್ವೀಪ್ ಚಟುವಟಿಕೆಗಳ ಸಭೆಯಲ್ಲಿ ಅವರು ಮಾತನಾಡಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆಂದೋಲನವನ್ನು ಯಶಸ್ವಿಗೊಳಿಸಲು, ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.


ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದಂತೆ ಕ್ರಮ ವಹಿಸುವುದು. ಯಾವುದೇ ಅನರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸದಂತೆ ಎಚ್ಚರ ವಹಿಸುವುದು ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಮುಖ ಉದ್ದೇಶವಾಗಿದೆ. ಅದೇ ರೀತಿ ಹಿಂದಿನ ಸಮಗ್ರ ಪರಿಷ್ಕರಣೆಯ ಮತದಾರರ ಪಟ್ಟಿಗೆ ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ಮತದಾರರ ಅರ್ಹತೆಯನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಹೊಸ ಮತದಾರರ ಸೇರ್ಪಡೆ, ಮರಣ ಹೊಂದಿದ ವ್ಯಕ್ತಿಗಳ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವುದು. ಖಾಯಂ ಆಗಿ ವಾಸಸ್ಥಳ ಬದಲಾಯಿಸಿದವರ ಅಥವಾ ಒಂದಕ್ಕಿಂತ ಹೆಚ್ಚು ಕಡೆ ಹೆಸರು ನಮೂದಾಗಿರುವ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಕ್ರಮ ವಹಿಸಲಾಗುತ್ತದೆ. ಈ ವೇಳೆ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಕಿವಿಮಾತು ಹೇಳಿದರು.


ಎಸ್.ಐ.ಆರ್‌ಗೆ ಪೂರಕವಾಗಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತದಾರರ ಸಹಾಯ ಕೇಂದ್ರ

ಗಳನ್ನು ಸ್ಥಾಪಿಸಬೇಕು. ಈ ಕೇಂದ್ರಗಳಲ್ಲಿ ಮತದಾರರಿಗೆ ಇರುವ ಗೊಂದಲಗಳನ್ನು ನಿವಾರಿಸುವ ಮತ್ತು ಅಗತ್ಯ ಮಾಹಿತಿಗಳಾದ ಮತದಾರರ ಸೇರ್ಪಡೆ, ವರ್ಗಾವಣೆ, ತಿದ್ದುಪಡಿ ಮಾಹಿತಿಗಳನ್ನ ಒದಗಿಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುವುದು. ಜಾಗೃತಿ ಕಾರ್ಯಕ್ರಮಗಳು ತಳಮಟ್ಟದ ಮತದಾರರಿಗೆ ತಲುಪುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು.


ಸಭೆಯಲ್ಲಿ ಮಾತನಾಡಿದ ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರರಾದ ನಂಜುಂಡೆಗೌಡ, ಶಾಲಾ ಕಾಲೇಜುಗಳಲ್ಲಿ ೧೭ ವರ್ಷ ತುಂಬಿದ ಯುವಕರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಮುಂಗಡವಾಗಿಯೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅವರಿಗೆ ೧೮ ವರ್ಷ ತುಂಬಿದ ತಕ್ಷಣ ಸ್ವಯಂಚಾಲಿತವಾಗಿ ಮತದಾರರ ಗುರುತಿನ ಚೀಟಿ ದೊರೆಯುತ್ತದೆ. ECINET ಆಪ್‌ಅನ್ನು ಡೌನ್‌ಲೋಡ್ ಮಾಡಿಕೊಂಡು ಮನೆಯಲ್ಲೇ ಕುಳಿತು/ ತಾವು ಇರುವ ಸ್ಥಳದಲ್ಲಿ ಹೊಸ ನೋಂದಣಿ ಅಥವಾ ತಿದ್ದುಪಡಿ ಮಾಡಿಕೊಳ್ಳಬಹುದು, ಈ ಬಗ್ಗೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.


ಶಾಲಾ-ಕಾಲೇಜುಗಳಲ್ಲಿ ’ಚುನಾವಣಾ ಸಾಕ್ಷರತಾ ಕ್ಲಬ್‌ಗಳು ಯುವ ಜನರಲ್ಲಿ ಜಾಗೃತಿ ಮೂಡಿಸಲು ಪ್ರೌಢಶಾಲೆಗಳು, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ’ಚುನಾವಣಾ ಸಾಕ್ಷರತಾ ಕ್ಲಬ್‌ಗಳನ್ನು ಸ್ಥಾಪಿಸಲು ಎಲ್ಲಾ ಮುಖ್ಯೋಪಾಧ್ಯರು ಹಾಗೂ ಪ್ರಾಂಶುಪಾಲುರು ಕ್ರಮ ವಹಿಸಬೇಕು. ಇವುಗಳ ಮೂಲಕ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮತದಾರರ ನೋಂದಣಿ ಪ್ರಕ್ರಿಯೆಯ ಅರಿವು ಮೂಡಿಸಬೇಕು. ಆಟಗಳು, ರಸಪ್ರಶ್ನೆ ಹಾಗೂ ಚರ್ಚಾಸ್ಪರ್ಧೆಗಳ, ಪೋಸ್ಟರ್ ರಚನೆ, ನಾಟಕ, ಕಿರುಚಿತ್ರಗಳನ್ನು ತಯಾರಿಸವು ಸ್ಪರ್ಧೆಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದರು. ವಿಶೇಷ ಹಾಗೂ ಕ್ರಿಯಾತ್ಮಕ ಸ್ವೀಪ್ ಚಟುವಟಿಕೆ ಕೈಗೊಳ್ಳುವ ಶಾಲೆ, ಕಾಲೇಜುಗಳಿಗೆ ಪ್ರಶಸ್ತಿ ವಿತರಿಸಲಾಗುವುದು ಎಂದರು.


ಇನ್ನೂ ಎಲ್ಲಾ ಸರ್ಕಾರಿ, ಸರ್ಕಾರೇತರ, ಸಹಕಾರಿ ಸಂಸ್ಥೆಗಳಲ್ಲಿ ಮತದಾರರ ಜಾಗೃತಿ ವೇದಿಕೆಗಳು ಸ್ಥಾಪಿಸಿ, ಯಾವೊಬ್ಬ ಮತದಾರರು ಮತದಾನದಿಂದ ಹೊರಗುಳಿಯದಂತೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುತ್ತಾ ದಾಖಲೀಕರಣ ಮಾಡಬೇಕು. ಧ್ವನಿವರ್ಧಕಗಳ ಮೂಲಕ ಡಂಗೂರ ಸಾರುವುದು ಮತ್ತು ಕರಪತ್ರಗಳ ವಿತರಣೆಯ ಮೂಲಕ. ಸಾರ್ವಜನಿಕರು ಹೆಚ್ಚು ಸೇರುವ ಡೈರಿ, ಪಡಿತರ ವಿತರಣಾ ಕೇಂದ್ರಗಳು ಬಳಿ ಪೋಸ್ಟರ್ ಹಾಕುವುದು, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀನ ಪ್ರದೇಶದಲ್ಲಿ ಅರಿವು ಮೂಡಿಸಲು ಕ್ರಮ ವಹಿಸಬೇಕಾಗಿದೆ ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಹೆಚ್.ಎನ್ ಮಂಜುನಾಥ್ ಸ್ವಾಮಿ, ಸಹಾಯಕ ಕಾರ್ಯದರ್ಶಿಗಳಾದ ವೆಂಕಟಾಚಲಪತಿ, ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಆರ್. ಮಂಜುಳ, ಉಪನ್ಯಾಸಕರಾದ ಎಂ. ವೆಂಕಟರಮಣ, ರಾಣಿ.ಬಿ, ಬಿಎಂ ರಾಧಮ್ಮ, ಪದ್ಮ ವಿಎಸ್. ಅನುರಾಧ ಕೆ ಭಾಗವಹಿಸಿದ್ದರು.