
ಸಂಜೆವಾಣಿ ವಾರ್ತೆ
ಹೊಸಪೇಟೆ ಏ 13: ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಧರಿಸುವಂತೆ ಪೊಲೀಸರು ವ್ಯಾಪಕ ಪ್ರಚಾರ ಅಭಿಯಾನ ಆರಂಭಿಸಿದ್ದು, ನಗರದಲ್ಲಿ ಕಳೆದ ಮೂರು ದಿನಗಳಿಂದ ನಗರದ ಹತ್ತಾರು ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ, ಹೆಲ್ಮೆಟ್ ಜಾಗೃತಿ ಮೂಡಿಸಿದರು.
ಹೆಲ್ಮೆಟ್ ತುಂಬಿದ್ದ ಬಾಕ್ಸ್ಗಳು ಸ್ಥಳದಲ್ಲೇ ಇದ್ದವು. ಹೆಲ್ಮೆಟ್ ಬೇಕಿದ್ದವರಿಗೆ 500ಕ್ಕೆ ಹೊಸ ಹೆಲ್ಮೆಟ್ ಕೊಡಿಸಿದರು. ಮನೆಯಲ್ಲಿದೆ ಎಂದವರಿಗೆ ಮನೆಗೆ ಹೋಗಿ ಹೆಲ್ಮೆಟ್ ತೆಗೆದುಕೊಂಡು ಬಂದು ವಾಹನ ಕೊಂಡೊಯ್ಯಿರಿ ಎಂದು ತಾಕೀತು ಮಾಡಿದರು.
‘ದ್ಚಿಚಕ್ರ ವಾಹನ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದವರೇ ಹೆಚ್ಚು ಸಾವು, ನೋವು ಕಾಣುತ್ತಿದ್ದಾರೆ. ಹೀಗಾಗಿ ದ್ವಿಚಕ್ರ ವಾಹನ ಸವಾರಿ ಮಾಡುವವರು ಮಾತ್ರವಲ್ಲ, ಹಿಂಬದಿಯಲ್ಲಿ ಕುಳಿತುಕೊಳ್ಳುವವರು ಸಹ ಹೆಲ್ಮೆಟ್ ಧರಿಸಬೇಕು. ಈ ಮೊದಲಿನಿಂದಲೂ ನಾವು ಜಾಗೃತಿ ಮೂಡಿಸುತ್ತಿದ್ದೆವು, ಇದೀಗ ಅಭಿಯಾನ ಬಿರುಸುಗೊಂಡಿದೆ ಅಷ್ಟೇ, ಸದ್ಯ ದಂಡ ಹಾಕುತ್ತಿಲ್ಲ, 15 ದಿನದ ಬಳಿಕ ದಂಡ ವಸೂಲಿ ಆರಂಭವಾಗಬಹುದು’ ಎಂದು ಎಸ್ಪಿ ಎಸ್.ಜಾಹ್ನವಿ ‘ಸಂಜೆ ವಾಣಿ’ಗೆ ತಿಳಿಸಿದರು.
‘ಬಿರು ಬಿಸಿಲಿನಲ್ಲಿ ಈ ರೀತಿ ಹೆಲ್ಮೆಟ್ ಕಡ್ಡಾಯ ಮಾಡುವುದು ಸರಿಯೇ?’ ಎಂದು ರಸ್ತೆಯಲ್ಲಿ ನಿಂತು ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕೇಳಿದಾಗ, ‘ಮಂಗಳೂರಿನಂತಹ ಅತಿಯಾದ ಬಿಸಿಲು, ಬೆವರು ಸುರಿಯುವ ನಗರಗಳಲ್ಲಿ ಸಹ ಹೆಲ್ಮೆಟ್ ಕಡ್ಡಾಯ ಇದೆ, ಅಲ್ಲಿ ಜನ ಪ್ರತಿರೋಧ ಮಾಡದೆ ಸಹಕರಿಸುತ್ತಿದ್ದಾರೆ, ಹೀಗಾಗಿ ಈ ನಿಯಮವನ್ನು ನಮ್ಮಲ್ಲಿ ಸಹ ಕಟ್ಟುನಿಟ್ಟಾಗಿ ಜಾರಿಗೆ ತರಲೇಬೇಕಾಗಿದೆ’ ಎಂದು ಸಂಚಾರ ಠಾಣೆ ಇನ್ಸ್ಪೆಕ್ಟರ್ ಹುಲುಗಪ್ಪ ಹೇಳಿದರು.
ಮುಂದುವರೆಯಲಿದೆ ಜಾಗೃತಿ ಅಭಿಯಾನ.
ಹೆಲ್ಮೆಟ್ ಜಾಗೃತಿ ಅಭಿಯಾನ ಮುಗಿದು ದಂಡ ಆರಂಭವಾಗುತ್ತಿದ್ದಂತೆ ಚಾಲನ ಪರವಾಗಿ ಪತ್ರ, ವಾಹನ ವಿಮೆ ಸೇರಿದಂತೆ ಸ್ಥಳದಲ್ಲಿಯೇ ಚಾಲಕರ ತಪ್ಪುಗಳನ್ನು ಸರಿಪಡಿಸಿ ಅವರನ್ನ ಸುರಕ್ಷಿತ ರಸ್ತೆ ಸಂಚಾರಕ್ಕೆ ಸಿದ್ಧಪಡಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ವಾಯುವ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಭೀಮಾ ಕಂಪನಿಗಳ ಸಹಯೋಗದಲ್ಲಿ ಜಂಟಿ ಜಾಗೃತಿ ಅಭಿಯಾನ ಮತ್ತು ಸ್ಥಳದಲ್ಲೇ ಪರಿಹಾರ ನೀಡುವ ಕಾರ್ಯಕ್ಕೂ ಚಲನ ನೀಡಲಾಗುವುದು ಎಂದು ವಿಜಯನಗರ ಜಿಲ್ಲಾ ಪೊಲೀಸ್ ಅಧ್ಯಕ್ಷ ಕಿ ಎಸ್ ಜಾಹ್ನವಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

























