Home ಸುದ್ದಿ ರಾಷ್ಟ್ರೀಯ ಹಾರುವ ವಿಮಾನದ ರೆಕ್ಕೆಯ ಮೇಲೆ ನಿಂತು ಅಜ್ಜಿ ಸಾಹಸ

ಹಾರುವ ವಿಮಾನದ ರೆಕ್ಕೆಯ ಮೇಲೆ ನಿಂತು ಅಜ್ಜಿ ಸಾಹಸ

ಲಂಡನ್,ಅ.17-ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ 99 ವರ್ಷದ ಹೆಲ್ಗಾ ಡಫಿ ಎಂಬ ಅಜ್ಜಿಯೊಬ್ಬರು ಹಾರುವ ವಿಮಾನದ ರೆಕ್ಕೆಯ ಮೇಲೆ ನಿಂತು (ವಿಂಗ್ ವಾಕಿಂಗ್) ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಬ್ರಿಟನ್‍ನ ಸೈರೆನ್ಸೆಸ್ಟರ್‍ನ ಆರ್‍ಎಫ್‍ಸಿ ರೆಂಡ್‍ಕಾಂಬ್ ಏರ್‍ಫೀಲ್ಡ್‍ನಲ್ಲಿ ಈ ಸಾಹಸ ಪ್ರದರ್ಶನ ನಡೆದಿದ್ದು, ಜರ್ಮನಿ ಮೂಲದ 99 ವರ್ಷದ ಹೆಲ್ಗಾ ಡಫಿ ಅವರು ತಮ್ಮ ವೃದ್ಧಾಶ್ರಮದ ನರ್ಸ್ ನೀಡಿದ ಸಲಹೆಯಿಂದ ಪ್ರೇರೇಪಿತರಾಗಿ ಈ ರೋಮಾಂಚಕಾರಿ ಸಾಹಸಕ್ಕೆ ಮುಂದಾಗಿದ್ದಾರೆ. ವಿಮಾನದ ಮೇಲ್ಭಾಗದಲ್ಲಿ ವಿಶೇಷವಾಗಿ ಬಿಗಿದುಕೊಂಡು ಸುಮಾರು ಒಂದು ಸಾವಿರ ಮೀಟರ್ ಗಗನಕ್ಕೇರಿ ವಿಮಾನದ ರೆಕ್ಕೆಯ ಮೇಲೆ ನಿಂತು ಸಂಚರಿಸಿದ ಅವರು, ಈ ಅನುಭವ ತನಗೆ ಸ್ವಲ್ಪವೂ ಭಯ ತರಲಿಲ್ಲ ಬದಲಿಗೆ ಅಪಾರ ರೋಮಾಂಚನ ನೀಡಿತ್ತು ಎಂದು ತಿಳಿಸಿದ್ದಾರೆ. ಈ ಸಾಹಸದ ಮೂಲಕ ವಿಶ್ವದ ಅತ್ಯಂತ ಹಿರಿಯ ಮಹಿಳಾ ವಿಂಗ್-ವಾಕರ್ ಎಂಬ ಹೆಗ್ಗಳಿಗೆ ಪಾತ್ರರಾಗಿರುವ ಇವರು, ವಿಮಾನದಿಂದ ಇಳಿದ ಬಳಿಕ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.

ಕೇವಲ ದಾಖಲೆಗಾಗಿ ಮಾತ್ರವಲ್ಲದೆ ಏರ್‍ಆಂಬುಲೆನ್ಸ್ ಸೇವೆಗಾಗಿ ನಿಧಿ ಸಂಗ್ರಹಿಸುವ ಸದುದ್ದೇಶದಿಂದಲೂ ಅವರು ಈ ಸಾಹಸವನ್ನು ಯಶಸ್ವಿಯಾಗಿ ಪೂರೈಸಿದ್ದು, ಯಾವುದೇ ವಯಸ್ಸಿನಲ್ಲಿಯೂ ಹೊಸ ಸಾಹಸಗಳನ್ನು ಪ್ರಯತ್ನಿಸಲು ಹಿಂಜರಿಯಬಾರದು ಎಂಬ ಸ್ಪಫೂರ್ತಿದಾಯಕ ಸಂದೇಶವನ್ನು ಇಡೀ ಜಗತ್ತಿಗೆ ನೀಡಿದ್ದಾರೆ.