
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.20: ನಗರದ ಪ್ರತಿಷ್ಠಿತ ವೀರಶೈವ ಕಾಲೇಜಿನಲ್ಲಿ ಭಕ್ತಿ ಭಂಡಾರಿ, ವಿಶ್ವ ಗುರು ಬಸವಣ್ಣನವರ 893ನೇ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಾಹುಕಾರ ಸತೀಶ್ಬಾಬು ಮಾತನಾಡುತ್ತ ವಿಶ್ವ ಗುರು ಬಸವಣ್ಣನವರು 893 ವರ್ಷಗಳ ಹಿಂದೆಯೆ ತುಳಿತಕ್ಕೊಳಗಾದ ಜನಗಳನ್ನು ಮೇಲೆತ್ತುವ ಮೂಲಕ ಸಮಾಜದಲ್ಲಿ ಸಮಾನತೆಯನ್ನು ತಂದರು. ಇದೊಂದು ಅಸಾಮಾನ್ಯವಾದ ಮನುಷ್ಯತ್ವದ ಪವಾಡವಾಗಿ ಚರಿತ್ರೆಯಲ್ಲಿ ದಾಖಲಾಗಿದೆ. ಇಂದು ವಿಶ್ವದಲ್ಲೇ ಬಸವಣ್ಣನವರ ವಚನಗಳು ಅತ್ಯಂತ ಪ್ರಚಲಿತವಾಗಿದು,್ದ ಅವರೊಬ್ಬ ಜಗತ್ತಿಗೆ ಮಾದರಿ ವ್ಯಕ್ತಿಯಾಗಿ ಇತಿಹಾಸದ ಪುಟಗಳಲ್ಲಿ ಅಜರಾಮರರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ತತ್ವ್ವಾದರ್ಶಗಳು ಸರ್ವಕಾಲಿಕವಾದವುಗಳು ಮತ್ತು ಇವುಗಳನ್ನು ಜೀವನದಲ್ಲಿ ಮಾರ್ಗಸೂಚಿಗಳಾಗಿ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಜಿ ಮಲ್ಲನಗೌಡರವರು ಮಾತನಾಡುತ್ತ ಸಮಾಜದ ಸರ್ವರನ್ನು ಒಳಗೊಂಡ ಸೌಹಾರ್ದತೆಯ ಮತ್ತು ಸಮಾನತೆಯ ಸಮಾಜವನ್ನು ಕಟ್ಟುವಲ್ಲಿ ಬಸವೇಶ್ವರರು ಹಾಕಿಕೊಟ್ಟ ಮೇಲ್ಪಂಕ್ತಿ ಇಂದು ಎಲ್ಲರಿಗೂ ಆದರ್ಶ ಮತ್ತು ಅವಶ್ಯಕವಾಗಿದೆ ಹಾಗಾಗಿಯೆ ನಾಡಿನ ಎಲ್ಲ ಜನಾಂಗದ ಜನರು ಅತ್ಯಂತ ಸಂಭ್ರಮದಿಂದ ಬಸವಣ್ಣನವರನ್ನು ಸ್ಮರಿಸುತ್ತಿದ್ದಾರೆ. ಇನ್ನು ಮುಂದೆಯಾದರೂ ಅವರ ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತ ಜಾತಿ ಬೇಧವನ್ನು ಅಳಿದು ಭಕ್ತಿಯ ಮಾರ್ಗದಲ್ಲಿ ಸಾಗಿ ಪುನೀತರಾಗೋಣ ಎಂದರು.
ಈ ಕಾರ್ಯಕ್ರಮಕ್ಕೆ ವೀರಶೈವ ಮಹಾವಿದ್ಯಾಲಯದ ಡಾ.ಜಿ.ಮನೋಹರ, ಡಾ.ರಾಜಶ್ರೀ ಪಾಟೀಲ್, ಡಾ.ಶ್ಯಾಮೂರ್ತಿ.ಜಿ, ಡಾ.ಕವಿತ.ಎಂ, ಡಾ.ವಿನೋದ್ ಕುಮಾರ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.






















