
ನವದೆಹಲಿ, ಏಪ್ರಿಲ್ ೧೮: ಮಹಿಳಾ ಮೀಸಲು ವಿಧೇಯಕವನ್ನು ಲೋಕಸಭೆಯಲ್ಲಿ ತಿರಸ್ಕರಿಸಿದ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಹಿಳಾ ಮೀಸಲು ಪ್ರಶ್ನೆಯಲ್ಲಿ ವಿರೋಧ ಪಕ್ಷಗಳು ಮಾಡಿದ “ಪಾಪಕ್ಕೆ ಜನರು ಶಿಕ್ಷೆ ನೀಡುತ್ತಾರೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಹೇಳಿದರು.
ಮಹಿಳಾ ಮೀಸಲು (ನಾರಿ ಶಕ್ತಿ ವಂದನ ಅಧಿನಿಯಮ) ತಿದ್ದುಪಡಿ ಲೋಕಸಭೆಯಲ್ಲಿ ಅಂಗೀಕಾರವಾಗದೇ ವಿಫಲವಾದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, “ದೇಶದ ಪ್ರತಿಯೊಬ್ಬ ನಾಗರಿಕರೂ ಮಹಿಳೆಯರ ಪ್ರಗತಿ ಹೇಗೆ ಅಡ್ಡಿಯಾಗಿದೆ ಎಂಬುದನ್ನು ಗಮನಿಸುತ್ತಿದ್ದಾರೆ. ಮಹಿಳಾ ಮೀಸಲು ವಿಧೇಯಕವನ್ನು ಸೋಲಿಸುವ ಮೂಲಕ ವಿರೋಧ ಪಕ್ಷಗಳು ಸಂವಿಧಾನಕ್ಕೆ ಅವಮಾನ ಮಾಡಿವೆ” ಎಂದು ಆರೋಪಿಸಿದರು.
ಮಹಿಳಾ ಮೀಸಲು ವಿಧೇಯಕ ಸೋಲಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ಕುಟುಂಬಾಧಾರಿತ ಪಕ್ಷಗಳು ಸಂಭ್ರಮಾಚರಣೆ ನಡೆಸಿರುವುದು ನೋವು ತಂದಿದೆ ಎಂದು ಅವರು ಹೇಳಿದರು.
“ದೇಶದ ಕೋಟ್ಯಾಂತರ ಮಹಿಳೆಯರು ಸಂಸತ್ತಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು. ಆದರೆ ಮಹಿಳೆಯರ ಹಿತಾಸಕ್ತಿಯಲ್ಲಿದ್ದ ಪ್ರಸ್ತಾವನೆ ಸೋತಾಗ ಕೆಲ ಪಕ್ಷಗಳು ಚಪ್ಪಾಳೆ ತಟ್ಟಿದವು” ಎಂದು ಟೀಕಿಸಿದರು.
ವಿರೋಧ ಪಕ್ಷಗಳ ವಿರುದ್ಧ ತೀವ್ರವಾಗಿ ಮಾತನಾಡಿದ ಪ್ರಧಾನಿ ಮೋದಿ “ಇಂದಿನ ೨೧ನೇ ಶತಮಾನದ ಮಹಿಳೆಯರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನು ಅವರಿಗೆ ಚೆನ್ನಾಗಿ ತಿಳಿದಿದೆ. ಮಹಿಳಾ ಮೀಸಲು ವಿರೋಧಿಸಿದ ಪಾಪಕ್ಕೆ ಜನತೆ ತಕ್ಕ ಶಿಕ್ಷೆ ನೀಡುತ್ತಾರೆ” ಎಂದು ಎಚ್ಚರಿಕೆ ನೀಡಿದರು.
ಮಹಿಳಾ ಸಬಲೀಕರಣವೇ ಈ ವಿಧೇಯಕದ ಉದ್ದೇಶವಾಗಿದ್ದು, ಎಲ್ಲ ರಾಜ್ಯಗಳಿಗೂ ಸಮಾನ ಪ್ರತಿನಿಧಿತ್ವ ನೀಡುವ ಪ್ರಯತ್ನ ಇದಾಗಿತ್ತು ಎಂದು ಅವರು ತಿಳಿಸಿದರು. “ಈ ಪ್ರಯತ್ನವನ್ನು ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ವಿಫಲಗೊಳಿಸಿವೆ. ಅವರು ಸದಾ ಮಹಿಳಾ ಮೀಸಲಾತಿಗೆ ಅಡ್ಡಿಪಡಿಸುತ್ತಲೇ ಬಂದಿದ್ದಾರೆ” ಎಂದು ಆರೋಪಿಸಿದರು.
ಇದೇ ವೇಳೆ, “ಕುಟುಂಬ ರಾಜಕಾರಣ ನಡೆಸುವ ಪಕ್ಷಗಳಿಗೆ ಮಹಿಳೆಯರ ಪ್ರಗತಿ ಭಯವಾಗಿದೆ. ಕುಟುಂಬದ ಹೊರಗಿನ ಮಹಿಳೆಯರು ಮುಂದೆ ಬಂದರೆ ಅವರ ಸ್ವಾರ್ಥ ರಾಜಕೀಯಕ್ಕೆ ಧಕ್ಕೆಯಾಗುತ್ತದೆ ಎಂಬ ಆತಂಕ ಅವರಿಗೆ ಇದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಪಂಚಾಯತ್ ಮಟ್ಟದಲ್ಲಿ ಈಗಾಗಲೇ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ತೋರಿಸಿರುವುದನ್ನು ಉಲ್ಲೇಖಿಸಿದ ಅವರು, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಪ್ರತಿನಿಧಿತ್ವ ಹೆಚ್ಚಿಸಲು ಈ ತಿದ್ದುಪಡಿ ಅಗತ್ಯವಿತ್ತು ಎಂದು ಹೇಳಿದರು.
ಕೊನೆಗೆ, ಕಾಂಗ್ರೆಸ್ ಪಕ್ಷವು ಸುಧಾರಣೆಗಳ ವಿಚಾರದಲ್ಲಿ ಸದಾ ತಪ್ಪು ಮಾಹಿತಿ ಹಬ್ಬಿಸುತ್ತಿದ್ದು, ದೇಶದ ಅಭಿವೃದ್ಧಿಯನ್ನು ತಡೆಹಿಡಿಯುತ್ತಿದೆ ಎಂದು ಓಚಿಡಿeಟಿಜಡಿಚಿ ಒoಜi ಅವರು ಆರೋಪಿಸಿದರು.
























