Home ಜಿಲ್ಲೆ ಮೈಸೂರು ಶೌಚಾಲಯವೇ ಇಲ್ಲದ ಆದರ್ಶ ಕ್ರೀಡಾಂಗಣ

ಶೌಚಾಲಯವೇ ಇಲ್ಲದ ಆದರ್ಶ ಕ್ರೀಡಾಂಗಣ

ಸಂಜೆವಾಣಿ ನ್ಯೂಸ್
ಮೈಸೂರು. ಆ.03:-
ಬೆಳಿಗ್ಗೆ 5 ಗಂಟೆಗೆ ವಾಯುವಿಹಾರಕ್ಕೆ ಬರುವ ನೂರಾರು ಮಹಿಳೆಯರು, ಸಂಜೆ ಕ್ರಿಕೆಟ್ ಆಡಲು ಬರುವ ಯುವಕರು, ಯೋಗ ಮಾಡುವ ಹಿರಿಯ ನಾಗರಿಕರು. ಜೆ.ಪಿ.ನಗರದ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣ ಒಂದಾನೊಂದು ಕಾಲದಲ್ಲಿ ಮೈಸೂರಿನ ಹೆಮ್ಮೆಯ ಕ್ರೀಡಾಂಗಣವಾಗಿತ್ತು. ಆದರೆ ಇಂದು ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಮೊದಲು ಎದುರಾಗುವ ಸಮಸ್ಯೆ ಒಂದೇ – ಶೌಚಾಲಯಕ್ಕೆ ಹೋಗಲು ಆಗುತ್ತಿಲ್ಲ.


ನಗರದ ಪ್ರತಿಷ್ಠಿತ ಜೆ.ಪಿ.ನಗರದಲ್ಲಿರುವ ಈ ಕ್ರೀಡಾಂಗಣಕ್ಕೆ ಮಹಾನಗರಪಾಲಿಕೆ, ವಿಧಾನಪರಿಷತ್, ಲೋಕಸಭಾ ಸದಸ್ಯರ ಅನುದಾನದಿಂದ ವಿಶಾಲ ವಾಕಿಂಗ್ ಪಥ, ಈಜುಕೊಳ, ಬಯಲು ರಂಗಮಂದಿರ, ಟೆನ್ನಿಸ್, ಫುಟ್‍ಬಾಲ್ ಅಂಗಣ, ಕ್ರಿಕೆಟ್ ತರಬೇತಿ ಮೈದಾನ ನಿರ್ಮಿಸಲಾಗಿತ್ತು. ನಿತ್ಯ ಒಂದಲ್ಲ ಒಂದು ಕಾರ್ಯಕ್ರಮ, ಭಾನುವಾರ ಕ್ರಿಕೆಟ್ ಪಂದ್ಯಾವಳಿ ಇಲ್ಲಿನ ಸಾಮಾನ್ಯ ದೃಶ್ಯ.


ಜೆ.ಪಿ.ನಗರ ಎ, ಬಿ, ಸಿ, ಡಿ, ಇ ಬ್ಲಾಕ್ ಜೊತೆಗೆ ನಾಚನಹಳ್ಳಿಪಾಳ್ಯ, ಕುಪ್ಪಲೂರು, ರಮಾಬಾಯಿ ನಗರ, ಮುನಿಸ್ವಾಮಿ ನಗರ, ಮಹದೇವಪುರದಿಂದಲೂ ನೂರಾರು ಜನ ಇಲ್ಲಿಗೆ ವಾಯುವಿಹಾರಕ್ಕೆ ಬರುತ್ತಾರೆ. ಅವರ ಅನುಕೂಲಕ್ಕಾಗಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯವನ್ನೂ ನಿರ್ಮಿಸಲಾಯಿತು.
ಆದರೆ ಇಂದು ಆ ಶೌಚಾಲಯದ ಸ್ಥಿತಿ ಏನು?
ಬಳಕೆಗೆ ಯೋಗ್ಯವಿಲ್ಲ ನಲ್ಲಿಗಳು ಒಡೆದಿವೆ. ಕಬೋರ್ಡ್‍ಗಳು ಕಿತ್ತು ಹೋಗಿವೆ. ಫೀಡ್‍ಬ್ಯಾಕ್ ಯಂತ್ರ ಕೆಟ್ಟು ನಿಂತಿದೆ. ಫ್ರೆಶರ್ ಪೈಪ್‍ಗಳು ಹಾಳಾಗಿವೆ. ಮೂತ್ರ ವಿಸರ್ಜನೆಗೆ ಅಳವಡಿಸಿದ್ದ ಕ್ಯಾಪ್‍ಗಳು ಕಳಚಿವೆ. ಬಾತ್‍ರೂಮ್‍ನ ಪರಿಕರಗಳು ಧ್ವಂಸವಾಗಿವೆ. ಶುಚಿತ್ವದ ಹೆಸರೇ ಇಲ್ಲ. ಇಲಿ, ಹೆಗ್ಗಣಗಳ ತಾಣವಾಗಿ ಮಾರ್ಪಟ್ಟಿದೆ.
ಬೆಳಿಗ್ಗೆ ವಾಕಿಂಗ್‍ಗೆ ಬಂದು ನೀರು ಕುಡಿದರೂ, ಶೌಚಾಲಯ ಬಳಸಲು ಆಗುವುದಿಲ್ಲ. ಮನೆಗೆ ಓಡಬೇಕು. ಇದು ಮಹಿಳೆಯರಿಗೆ ಬಹಳ ಕಷ್ಟ ಎಂದು ನಿತ್ಯ ಬರುವ ವಾಯುವಿಹಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.


ಯಾರ ಹೊಣೆ?
ಈ ಬಗ್ಗೆ ಹಲವು ಬಾರಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆಯಂತೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. “ಮೊದಲು ಸ್ಥಳೀಯ ಪಾಲಿಕೆ ಸದಸ್ಯರು ಬಂದು ನೋಡಿ ದುರಸ್ತಿ ಮಾಡಿಸುತ್ತಿದ್ದರು. ಈಗ ಚುನಾಯಿತ ಪ್ರತಿನಿಧಿಗಳಿಲ್ಲ. ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ” ಎಂದು ಸ್ಥಳೀಯ ನಿವಾಸಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.


ಕೋಟಿ ಕೋಟಿ ಅನುದಾನದಲ್ಲಿ ನಿರ್ಮಾಣವಾದ ಕ್ರೀಡಾಂಗಣದಲ್ಲಿ ಮೂಲಭೂತ ಸೌಲಭ್ಯವಾದ ಶೌಚಾಲಯವೇ ನಿರ್ವಹಣೆ ಇಲ್ಲದೆ ಹಾಳಾದರೆ, `ಸ್ವಚ್ಛ ಮೈಸೂರು’ ಘೋಷಣೆ ಕೇವಲ ಫಲಕಕ್ಕೆ ಮಾತ್ರವೇ? ಆಡಳಿತ ಎಚ್ಚೆತ್ತುಕೊಂಡು ತಕ್ಷಣ ದುರಸ್ತಿ ಮಾಡದಿದ್ದರೆ, ಕ್ರೀಡಾಸಕ್ತರು ಮತ್ತು ವಾಯುವಿಹಾರಿಗಳು ಕ್ರೀಡಾಂಗಣದಿಂದಲೇ ಮುಖ ತಿರುಗಿಸುವ ದಿನ ದೂರವಿಲ್ಲ.