Home ಜಿಲ್ಲೆ ಮೈಸೂರು ವಿಕಸಿತ ಭಾರತದ ಗುರಿ ತಲುಪಲು ಔಪಚಾರಿಕ ವಲಯದ ಉದ್ಯೋಗ ಸೃಷ್ಟಿ ಅಗತ್ಯ: ಯದುವೀರ್ ಒಡೆಯರ್

ವಿಕಸಿತ ಭಾರತದ ಗುರಿ ತಲುಪಲು ಔಪಚಾರಿಕ ವಲಯದ ಉದ್ಯೋಗ ಸೃಷ್ಟಿ ಅಗತ್ಯ: ಯದುವೀರ್ ಒಡೆಯರ್

ಸಂಜೆವಾಣಿ ನ್ಯೂಸ್
ಮೈಸೂರು, ಜೂ.20:-
ಭಾರತದ ಸಮಗ್ರ ಮತ್ತು ಸಂಪೂರ್ಣ ಆರ್ಥಿಕ ಅಭಿವೃದ್ಧಿಗಾಗಿ ಪ್ರತಿಯೊಬ್ಬರಿಗೂ ಉದ್ಯೋಗದ ಅವಕಾಶಗಳು ಸಿಗಬೇಕು ಹಾಗೂ ದೇಶದ ಬಹುಪಾಲು ಜನರನ್ನು ಅನೌಪಚಾರಿಕ ವಲಯದಿಂದ ಔಪಚಾರಿಕ ವಲಯಕ್ಕೆ ಫಾರ್ಮಲ್ ಸೆಕ್ಟರ್ ತರುವುದು ಇಂದಿನ ಅಗತ್ಯವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿದರು.


ಇಂದು ನಗರದ ವಿದ್ಯಾವರ್ಧಕ ಕಾಲೇಜಿನಲ್ಲಿ ಪ್ರಾದೇಶಿಕ ಕಚೇರಿಯ ನೌಕರರ ಭವಿಷ್ಯನಿಧಿ ಸಂಸ್ಥೆಯ ವತಿಯಿಂದ ಮೂಲಕ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‍ಗಾರ್ ಯೋಜನೆ ಯ ಪೆÇ್ರೀತ್ಸಾಹ ಧನ ವಿತರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿಯವರು ವಿಕಸಿತ ಭಾರತಕ್ಕಾಗಿ ದೊಡ್ಡ ಗುರಿಯನ್ನು ಇಟ್ಟುಕೊಂಡಿದ್ದಾರೆ. ಸಮಗ್ರ ಭಾರತೀಯರ ಆರ್ಥಿಕ ಸಬಲೀಕರಣವೇ ಇದರ ಮೂಲ ಉದ್ದೇಶವಾಗಿದೆ. ಅಂತ್ಯೋದಯದ ಸದ್ಕಲ್ಪನೆಯ ಮೂಲಕ ಸಮಾಜದ ಕೊನೆಯ ವ್ಯಕ್ತಿಗೂ ಗುಣಮಟ್ಟದ ಬದುಕನ್ನು ಒದಗಿಸುವುದು ಮತ್ತು ಎಲ್ಲರಿಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಈ ಯೋಜನೆಯ ಆಶಯವಾಗಿದೆ ಎಂದು ಅವರು ಹೇಳಿದರು.


ದೇಶದ ಆರ್ಥಿಕ ವ್ಯವಸ್ಥೆ ಬಲಗೊಳ್ಳಬೇಕಾದರೆ ಔಪಚಾರಿಕ ವಲಯದ ವ್ಯಾಪ್ತಿ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ ಭದ್ರತೆಯ ಜಾಲವನ್ನು ವಿಸ್ತರಿಸುವುದು ಅತ್ಯಂತ ಪ್ರಮುಖವಾಗಿದೆ. ಆರೋಗ್ಯದ ದೃಷ್ಟಿಯಿಂದ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ ನೆರವಾಗಲು ಈ ಸಾಮಾಜಿಕ ಭದ್ರತೆ ಪ್ರತಿಯೊಬ್ಬರಿಗೂ ಸಹಕಾರಿಯಾಗಲಿದೆ ಈ ನಿಟ್ಟಿನಲ್ಲಿ ಪಿಎಂ ರೋಜ್‍ಗಾರ್ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ ಎಂದರು.


ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಕೇಂದ್ರ ಸರ್ಕಾರ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಈಗಾಗಲೇ 2400 ಕೋಟಿಗೂ ಅಧಿಕ ಮೊತ್ತದ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ. ಅರ್ಹ ಫಲಾನುಭವಿಗಳಿಗೆ ಹಂತಹಂತವಾಗಿ ಒಟ್ಟು 15,000 ವರೆಗೆ ಪೆÇ್ರೀತ್ಸಾಹ ಧನ ಮತ್ತು ತರಬೇತಿಯ ನೆರವು ಸಿಗಲಿದೆ. ಇದರೊಂದಿಗೆ ಉದ್ಯೋಗದಾತರಿಗೂ ಕೂಡ ಪ್ರತಿ ಉದ್ಯೋಗ ಸೃಷ್ಟಿಗೆ 3,000 ಗಳ ಪೆÇ್ರೀತ್ಸಾಹಕ ಸೌಲಭ್ಯ ಸಿಗುವುದರಿಂದ ಉದ್ಯಮಿಗಳು ಮತ್ತು ಸಾರ್ವಜನಿಕರು ಇದರ ಬಗ್ಗೆ ಹೆಚ್ಚಿನ ಪ್ರಚಾರ ನಡೆಸಿ, ಅರ್ಹರು ಇದರ ಸೌಲಭ್ಯ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ಬಿ. ಸದಾಶಿವೇಗೌಡ ಅವರು ಮಾತನಾಡಿ ನಮ್ಮ ದೇಶದಲ್ಲಿ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿರುವ ವಿವಿಧ ಯೋಜನೆಗಳು ಇಂದು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿರುವುದು ದೇಶದ ಭವಿಷ್ಯವನ್ನೇ ಬದಲಾಯಿಸಲಿದೆ ಎಂದು ಹೇಳಿದರು.


2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕೆಂಬ ಬಲವಾದ ದೃಷ್ಟಿಕೋನ ನಮ್ಮ ಮುಂದಿದೆ. ಈ ಗುರಿಯನ್ನು ತಲುಪಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಉದ್ಯೋಗದಾತರು ಉದ್ಯೋಗಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬ ನಾಗರಿಕನಲ್ಲೂ ಇದು ನನ್ನ ದೇಶ, ನನ್ನ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬ ಆಕಾಂಕ್ಷೆ ಮತ್ತು ಆಸೆ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಇಪಿಎಫ್‍ಒ ಅಧಿಕಾರಿಗಳಾದ ಷಡಕ್ಷರಿ ಗೋಪಾಲ್ ರೆಡ್ಡಿ, ಗಣ್ಯರಾದ ಟಿ.ಸಿ.ಪೂರ್ಣಿಮಾ ಮುರಳಿಧರನ್, ಗಿರೀಶ್ ಲಿಂಗಣ್ಣ,ಪವನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.