
ಸಂಜೆವಾಣಿ ವಾರ್ತೆ
ಹನೂರು ನ 3 :- ತಾಲೂಕಿನ ಮಾರ್ಟಳ್ಳಿ ಗ್ರಾಮದ ಸ್ಮಶಾನದಲ್ಲಿ ಸೋಮವಾರ ಕ್ರೈಸ್ತರು ತಮ್ಮ ಪೂರ್ವಿಕರ ಸಮಾಧಿಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಸಮಾಧಿ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಿದರು.
ಪ್ರತಿ ವರ್ಷ ನವೆಂಬರ್ 2ರಂದು ಪೂರ್ವಿಕರ ಸಮಾಧಿಗಳಿಗೆ ಪೂಜೆ ಸಲ್ಲಿಸುವುದು ಕ್ರೈಸ್ತರ ಸಂಪ್ರದಾಯವಾಗಿದೆ. ಅದರಂತೆ ಈ ಬಾರಿಯೂ ಸಮಾಧಿಗಳಿಗೆ ಸುಣ್ಣ ಮತ್ತು ಬಣ್ಣ ಬಳಿದು, ಸ್ವಚ್ಛಗೊಳಿಸಿ ಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸೋಮವಾರ ಸಂಜೆ ಸಮಾಧಿಗಳನ್ನು ವಿವಿಧ ಬಗೆಯ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.
ಈ ಸಂದರ್ಭದಲ್ಲಿ ಧರ್ಮಕೇಂದ್ರದ ಗುರುಗಳಾದ ಫಾ. ಡಾ. ಎಂ. ವಿನ್ಸೆಂಟ್ ಅವರು ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. ಫಾ. ಸಂತಿಯಾಗು, ಫಾ. ಕುಮಾರ್, ಫಾ. ಕಾರ್ತಿಕ್ ಸೇರಿದಂತೆ ಇತರ ಗುರುಗಳ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆಗಳು ಹಾಗೂ ಪೂಜಾ ವಿಧಿವಿಧಾನಗಳು ನೆರವೇರಿದವು.
ಪೂರ್ವಿಕರ ಕುಟುಂಬಸ್ಥರು ತಮ್ಮ ಕುಟುಂಬದ ಸಮಾಧಿಗಳ ಮೇಲೆ ಮೇಣದ ಬತ್ತಿಗಳನ್ನು ಬೆಳಗಿಸಿ, ಪ್ರಾರ್ಥನೆ ಸಲ್ಲಿಸಿದರು. ದಿವ್ಯ ಬಲಿಪೂಜೆಯ ಸಂದರ್ಭದಲ್ಲಿ ಲ್ಯಾಟಿನ್ ಭಾಷೆಯ ಭಕ್ತಿಗೀತೆಗಳನ್ನು ಹಾಡಲಾಗಿದ್ದು, ಭಕ್ತರ ಗಮನ ಸೆಳೆಯಿತು.
ಈ ಮೂಲಕ ಕ್ರೈಸ್ತರು ತಮ್ಮ ಅಗಲಿದ ಪೂರ್ವಿಕರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸುವ ಮೂಲಕ ಸಮಾಧಿ ಹಬ್ಬವನ್ನು ಭಕ್ತಿ ಪೂರ್ವಕವಾಗಿ ಆಚರಿಸಿದರು.


























