
ಸಂಜೆವಾಣಿ ನ್ಯೂಸ್
ಮೈಸೂರು,ಆ.06: ದೇಶದ ಮೊದಲ ರೈತರ ಸಾವಯವ ಬೀಜ ಕಂಪನಿಯಾದ ‘ದೇಸಿ ಸೀಡ್ಸ್ ಪ್ರಡ್ಯೂಸರ್ ಕಂಪನಿ’ಯ 12ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಮೈಸೂರಿನ ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆಯಿತು.
ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಧಾರವಾಡ ಜಿಲ್ಲೆಗಳ ಬೀಜ ಸಂರಕ್ಷಕರು ಜೊತೆಗೂಡಿ ಆರಂಭಿಸಿದ ಈ ರೈತ ಕಂಪನಿ ಈಗ ಹೆಮ್ಮರವಾಗಿ ಬೆಳೆದು, ‘ಸಹಜ ಸೀಡ್ಸ್’ ಬ್ರಾಂಡ್ ಅಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ‘ಕಿಸಾನ್ ಮಾಲ್’ ಸಾವಯವ ಮಳಿಗೆಯನ್ನು ನಡೆಸುತ್ತಿದೆ.
2025-26ನೇ ಸಾಲಿನಲ್ಲಿ ಕಂಪನಿಯು 1.1 ಕೋಟಿ ರೂಪಾಯಿ ವಹಿವಾಟು ಮಾಡಿದ್ದು, ಬಂದ 75,000 ರೂಪಾಯಿ ಲಾಭಾಂಶವನ್ನು ಬೀಜ ಪೂರೈಕೆ ಮಾಡಿದ ರೈತರಿಗೆ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ತೋಟಗಾರಿಕಾ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ. ಮಂಜುನಾಥ ಅಂಗಡಿ ಅವರು ಮಾತನಾಡಿ, ಎಲ್-ನಿನೋ ಪರಿಣಾಮದಿಂದ ತೋಟಗಾರಿಕಾ ಬೆಳೆಗಳಲ್ಲಿ ಬೆಳವಣಿಗೆ ಕುಂಠಿತ, ಹೂಬಿಡುವಿಕೆ ವಿಳಂಬ, ಕೀಟ-ರೋಗಗಳಿಂದ ಇಳುವರಿ ಕುಸಿತವಾಗಲಿದೆ. ಈ ಹಿನ್ನೆಲೆಯಲ್ಲಿ ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಬರ ನಿರೋಧಕ ಗುಣ ಹೊಂದಿರುವ ಸ್ಥಳೀಯ ತಳಿಗಳಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಕಂಪನಿಯ ನಿರ್ದೇಶಕ ಹಾಗೂ ಹೆಸರಾಂತ ಬೀಜ ಸಂರಕ್ಷಕ ಶಿವಳ್ಳಿ ಬೋರೇಗೌಡ ಅವರು, ವಾತಾವರಣ ಬದಲಾವಣೆಗೆ ಹೊಂದಿಕೊಳ್ಳುವ ಸ್ಥಳೀಯ ತಳಿಗಳ ಬೀಜಗಳನ್ನು ರೈತರೇ ಉತ್ಪಾದಿಸಿ ಮಾರುಕಟ್ಟೆಗೆ ತರುವುದು ಮುಖ್ಯ. ಈ ನಿಟ್ಟಿನಲ್ಲಿ ಸಹಜ ಸೀಡ್ಸ್ ಮಹತ್ವದ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರೋಟರಿ ಕ್ಲಬ್ ಜೆ.ಪಿ. ನಗರ ಅಧ್ಯಕ್ಷ ಡಾ. ನಾಗರಾಜ್ ಡಿ.ಎಂ ಮಾತನಾಡಿ, ಮೈಸೂರಿನ ಗ್ರಾಹಕರಲ್ಲಿ ಅರಿವು ಮೂಡಿಸಲು ನಡೆಯುವ ರೈತ ಸಂತೆ ಮತ್ತು ಮೇಳಗಳಿಗೆ ರೋಟರಿ ಕ್ಲಬ್ ಅಗತ್ಯ ನೆರವು ನೀಡಲಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಂಪನಿಯ ಸಂಸ್ಥಾಪಕ ಜಿ. ಕೃಷ್ಣ ಪ್ರಸಾದ್ ಅವರು, ಕೆಲವೇ ಆಸಕ್ತ ಬೀಜ ಸಂರಕ್ಷಕರ ದೂರದೃಷ್ಟಿಯಿಂದ ಸಹಜ ಸೀಡ್ಸ್ ಜನ್ಮತಾಳಿತು. ಈಗ ಸಹಜ ಸೀಡ್ಸ್ನ ದೇಸಿ ಬೀಜಗಳಿಗೆ ಭಾರತದಾದ್ಯಂತ ಬೇಡಿಕೆಯಿದೆ. ಮೇಘಾಲಯ, ಒಡಿಶಾ, ಆಂಧ್ರಪ್ರದೇಶ ಸರ್ಕಾರಗಳು ಸಹಜ ಸೀಡ್ಸ್ನ ಬೀಜಗಳನ್ನು ಖರೀದಿಸುತ್ತಿವೆ. ಬೀಜ ಸ್ವಾವಲಂಬನೆಯನ್ನು ಸಾಕಾರಗೊಳಿಸುತ್ತಿರುವ ಸಹಜ ಸೀಡ್ಸ್ ಇತರ ರೈತ ಕಂಪನಿಗಳಿಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಜ ಸೀಡ್ಸ್ನ ಪ್ರಗತಿಗೆ ದುಡಿದ ಅರ್ಪಿತಾ ಸಿ.ಪಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ರವಿ ಮಾಗಲ್, ನಿರ್ದೇಶಕರಾದ ಮಂಜುಳಾ ರಾಮಕೃಷ್ಣ, ನರಸಿಂಹರೆಡ್ಡಿ, ಶ್ರೀನಿವಾಸಮೂರ್ತಿ, ಶ್ರೇಣಿಕರಾಜ್ ಹಾಗೂ ರೋಟರಿ ಕ್ಲಬ್ ಕಾರ್ಯದರ್ಶಿ ಪ್ರಕಾಶ್ ಎನ್ ಉಪಸ್ಥಿತರಿದ್ದರು.

































