Home ಜಿಲ್ಲೆ ಮೈಸೂರು ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ

ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.01:-
ನಗರದ ಗಾಂಧಿ ಚೌಕದಲ್ಲಿರುವ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದ್ದು, ಈ ಬಗ್ಗೆ ನಡೆದಿರುವ ಅಪಪ್ರಚಾರಕ್ಕೆ ಸದಸ್ಯರು, ಗ್ರಾಹಕರು ಕಿವಿಗೊಡಬಾರದೆಂದು ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎಸ್‍ಬಿಎಂ ಮಂಜು ಮನವಿ ಮಾಡಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಾರ್ಚ್ ಅಂತ್ಯಕ್ಕೆ ಬ್ಯಾಂಕಿನಲ್ಲಿ 33,373 ಸದಸ್ಯರಿದ್ದು, ಒಟ್ಟಾರೆ 168.68 ಕೋಟಿ ಠೇವಣಿ ಇದೆ. ಇದಲ್ಲದೆ ಕಳೆದ ಸಾಲಿನಲ್ಲಿ 1.30 ಕೋಟಿ ನಿವ್ವಳ ಲಾಭ ಗಳಿಸಿದೆ. ಒಟ್ಟಾರೆ 111 ಕೋಟಿ ಸಾಲ ವಿತರಿಸಲಾಗಿದೆ. ಇದರೊಡನೆ ಎಲ್ಲರಿಗೂ ಡಿವಿಡೆಂಟ್ ಹಾಗೂ ಠೇವಣಿಗೆ ಬಡ್ಡಿ ಸಹಾ ತಪ್ಪದೇ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲವೂ ಸಕ್ರಮವಾಗಿರುವ ಹಿನ್ನೆಲೆ ಎ ಶ್ರೇಣಿ ನೀಡಿದೆ. ಈ ಬ್ಯಾಂಕನ್ನು ನಾಲ್ವಡಿಯವರು 1906ರಲ್ಲಿ ಸ್ಥಾಪಿಸಿದ್ದು, ಅಂದಿನಿಂದಲೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೆಲವರು ವೈಯಕ್ತಿ ಹಿತಾಸಕ್ತಿ ಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಏನಾದರೂ ಅನುಮಾನಗಳಿದ್ದಲ್ಲಿ ಬ್ಯಾಂಕಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.

ಗೋಷ್ಠಿಯಲ್ಲಿ ಅಧ್ಯಕ್ಷ ಜೆ.ಯೋಗೀಶ್, ಇನ್ನಿತರ ಪದಾಧಿಕಾರಿಗಳಾದ ಟೆಂಟ್ ರವಿ, ನಿರಂಜನ್, ಸೋಮಣ್ಣ, ಪ್ರಮೀಳಾ, ರಾಜೇಶ್ವರಿ, ರಾಜಕೀಯ ರವಿ, ಗಿರೀಶ್, ಕಾರ್ಯದರ್ಶಿ ಕೆ.ಹರ್ಷಿತ್ ಗೌಡ ಇದ್ದರು.