
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.06: ಎಐಪಿಎಫ್ (ಆಲ್ ಇಂಡಿಯಾ ಪವರ್ ಮೆನ್ಸ್ ಫೆಡರೇಷನ್) ಹಾಗೂ ಎಐಯುಟಿಯುಸಿ ನೇತೃತ್ವದಲ್ಲಿ ವಿದ್ಯುತ್ ಕ್ಷೇತ್ರದ ಜೆಸ್ಕಾಂನ ಹೊರಗುತ್ತಿಗೆ ನೌಕರರಿಂದ
ಪರಿಷ್ಕೃತ ವೇತನ ಜಾರಿಗೊಳಿಸಲು ಕೂಡಲೆ ಸೂಕ್ತ ಕ್ರಮ ಕೖಗೊಳ್ಳಬೇಕೆಂದು ಒತ್ತಾಯಿಸಿ ಬಳ್ಳಾರಿ ವಲಯದ ಮುಖ್ಯ ಇಂಜಿನಿಯರ್ ಮೌನೇಶ್ ಎಸ್ ಪತ್ತಾರ್ ಹಾಗೂ ಬಳ್ಳಾರಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹುಸೇನ್ ಬಾಷಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಐಪಿಎಫ್ ಹಾಗೂ ಎಐಯುಟಿಯುಸಿ ಮುಖಂಡರಾದ ಡಾ. ಪ್ರಮೋದ್ ಅವರು ಯಾವುದೇ ಕಾರಣಕ್ಕೂ ವಿಳಂಬಗೊಳ್ಳದಂತೆ, ಗುತ್ತಿಗೆದಾರರಿಂದ ಉಲ್ಲಂಘನೆಯಾಗದಂತೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಸೂಕ್ತ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಇದಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು ಹೊರಗುತ್ತಿಗೆ ನೌಕರರು ಇಲಾಖೆಗೆ ಅತ್ಯಂತ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ, ಇದು ಜಾರಿಯಾಗುವಂತೆ ಜೆಸ್ಕಾಂನ ಎಂ.ಡಿ ಅವರ ಗಮನಕ್ಕೂ ತರುವುದಾಗಿ ತಿಳಿಸಿದರು.
ಎಐಪಿಎಫ್ ಮುಖಂಡರಾದ ಕಿರಣ್ ಕುಮಾರ್, ಜೆಸ್ಕಾಂ ಯುನಿಯನ್ ಮುಖಂಡರಾದ ರೀನಾ, ಸತೀಶ್, ಯುವರಾಜ್, ರೋಹಿಣಿ, ಸುಚಿತ್ರಾ, ಮಾರುತಿ, ಗೀತಾ, ಶ್ವೇತಾ, ರವಿ, ಶೋಬನ್ ಬಾಬು ಮುಂತಾದವರು ಉಪಸ್ಥಿತರಿದ್ದರು.


























