
ದಕ್ಷಿಣ ಭಾರತದ ಸೂಪರ್‍ಸ್ಟಾರ್ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಅವರ ನಟನಾ ವೃತ್ತಿಜೀವನದ 69ನೇ ಹಾಗೂ ಕೊನೆಯ ಚಿತ್ರ ಎನ್ನಲಾದ “ಜನನಾಯಕನ್” ಕುರಿತು ವಿಶ್ವಾದ್ಯಂತ ಇರುವ ಚಿತ್ರಪ್ರೇಮಿಗಳಿಗೆ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಭಾರತದಲ್ಲಿ ಸೆನ್ಸಾರ್‍ಶಿಪ್ ಹಾಗೂ ಕಾನೂನು ಸಂಘರ್ಷಗಳೆಲ್ಲವನ್ನೂ ಯಶಸ್ವಿಯಾಗಿ ಮುಗಿಸಿರುವ ಈ ಚಿತ್ರ, ವಿದೇಶಗಳಲ್ಲಿ ಯಾವುದೇ ಕಟ್ ಇಲ್ಲದೆ (ಅನ್‍ಕಟ್ ಆವೃತ್ತಿ) ಮೂಲ ರೂಪದಲ್ಲೇ ತೆರೆಗೆ ಬರಲು ಸಜ್ಜಾಗಿದೆ.
ಯುಕೆ ಥಿಯೇಟರ್‍ಗಳಲ್ಲಿ ಯಾವುದೇ ಕಡಿತವಿಲ್ಲ!
ಯುನೈಟೆಡ್ ಕಿಂಗ್‍ಡಮ್ ನಲ್ಲಿ ‘ಜನನಾಯಕನ್’ ಚಿತ್ರವನ್ನು ಯಾವುದೇ ಕಟ್ ಇಲ್ಲದೆ ಪ್ರದರ್ಶಿಸಲಾಗುವುದು ಎಂದು ಅಲ್ಲಿನ ಅಧಿಕೃತ ವಿತರಕ ಸಂಸ್ಥೆಯಾದ ‘ಅಹಿಂಸಾ ಎಂಟರ್‍ಟೈನ್‍ಮೆಂಟ್’ ಸಾಮಾಜಿಕ ಜಾಲತಾಣಗಳ ಮೂಲಕ ದೃಢಪಡಿಸಿದೆ.
ಭಾರತದಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಪ್ರಕ್ರಿಯೆಯ ಭಾಗವಾಗಿ ಚಿತ್ರದ ಕೆಲವು ಆಕ್ಷನ್ ದೃಶ್ಯಗಳು ಹಾಗೂ ಸಂಭಾಷಣೆಗಳಿಗೆ ಕತ್ತರಿ ಹಾಕಲಾಗಿದೆ. ಆದರೆ, ಯುಕೆ ಪ್ರೇಕ್ಷಕರು ಮಾತ್ರ ನಿರ್ದೇಶಕ ಎಚ್. ವಿನೋತ್ ಹಾಗೂ ಚಿತ್ರತಂಡ ಮೂಲತಃ ಹೇಗೆ ಕಲ್ಪಿಸಿಕೊಂಡಿತ್ತೋ, ಅದೇ ಭರಪೂರ ಆಕ್ಷನ್ ಮತ್ತು ಅನ್‍ಕಟ್ ಮಾಸ್ ಎಲಿಮೆಂಟ್‍ಗಳೊಂದಿಗೆ ಚಿತ್ರವನ್ನು ಥಿಯೇಟರ್‍ಗಳಲ್ಲಿ ಕಣ್ತುಂಬಿಕೊಳ್ಳಲಿದ್ದಾರೆ.
ತಾರಾಗಣ ಮತ್ತು ತಾಂತ್ರಿಕ ಶ್ರೀಮಂತಿಕೆ
ಸ್ಟಾರ್ ನಿರ್ದೇಶಕ ಎಚ್. ವಿನೋತ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ರಾಕ್‍ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ವಿಜಯ್ ಅವರೊಂದಿಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್ ಹಾಗೂ ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನ ಹಿಟ್ ಚಿತ್ರ ‘ಭಗವಂತ್ ಕೇಸರಿ’ಯ ರೀಮೇಕ್ ಎನ್ನಲಾದ ಈ ಚಿತ್ರದಲ್ಲಿ ವಿಜಯ್ ವಿಭಿನ್ನ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣ
ದಳಪತಿ ವಿಜಯ್ ಅವರು ಇತ್ತೀಚೆಗೆ ಸಕ್ರಿಯ ರಾಜಕಾರಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದರಿಂದ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದರಿಂದ, “ಜನನಾಯಕನ್” ಅವರ ನಟನಾ ಬದುಕಿನ ಕೊನೆಯ ಸಿನಿಮಾ ಆಗಿದೆ. ಹೀಗಾಗಿ ಈ ಸಿನಿಮಾ ಅಭಿಮಾನಿಗಳಿಗೆ ಕೇವಲ ಮನರಂಜನೆಯಷ್ಟೇ ಅಲ್ಲದೆ, ಭಾವನಾತ್ಮಕವಾಗಿಯೂ ಅತ್ಯಂತ ವಿಶೇಷವಾಗಿದ್ದು, ಬಾಕ್ಸ್ ಆಫೀಸ್‍ನಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಮುನ್ಸೂಚನೆ ನೀಡಿದೆ.
ಜುಲೈ 24 ರಂದು ಅದ್ದೂರಿ ಬಿಡುಗಡೆ!
ವಾಸ್ತವವಾಗಿ, ಈ ಚಿತ್ರವು ಜನವರಿ 9, 2026 ರಂದೇ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯೊಂದಿಗಿನ ಸುದೀರ್ಘ ವಾದ-ವಿವಾದ, ಕಾನೂನು ಪ್ರಕ್ರಿಯೆಗಳು ಹಾಗೂ ಇಂಟರ್ನೆಟ್‍ನಲ್ಲಿ ಲೀಕ್ ಆಗಿದ್ದ ವಿವಾದಗಳಿಂದಾಗಿ ಸಿನಿಮಾ ಮುಂದೂಡಲ್ಪಟ್ಟಿತ್ತು. ಇದೀಗ ಭಾರತದಲ್ಲಿ ‘ಂ’ ಪ್ರಮಾಣಪತ್ರದೊಂದಿಗೆ ಸೆನ್ಸಾರ್ ಮುಗಿಸಿರುವ ‘ಜನನಾಯಕನ್’, ಬರುವ ಜುಲೈ 24, 2026 ರಂದು ವಿಶ್ವಾದ್ಯಂತ ತೆರೆಕಾಣಲು ದಿನಾಂಕ ನಿಗದಿಪಡಿಸಿದೆ. ಇದು ಸುಮಾರು ಏಳು ತಿಂಗಳಿಂದ ಕಾಯುತ್ತಿದ್ದ ಅಭಿಮಾನಿಗಳ ಸಡಗರವನ್ನು ದುಪ್ಪಟ್ಟು ಮಾಡಿದೆ.
































