
ಸಿ. ಶಿವರಾಮ ಸಿರಿಗೇರಿ
ಕುರುಗೋಡು ಏ.11. ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಬ್ ರಿಜಿಸ್ಟರ್ ಕಚೇರಿಯ ಬಹುತೇಕ ಗೋಡೆಗಳು 5, 6 ಮೀಟರುಗಳ ಉದ್ದಕ್ಕೆ ಬಿರುಕು ಬಿಟ್ಟಿವೆ. ಅಲ್ಲದೇ ಕಚೇರಿಯ ಮೇಲ್ಚಾವಣಿಯ ಕಾಂಕ್ರಿಟ್ ಅಲ್ಲಲ್ಲಿ ಉದರಿ ಬಿದ್ದು, ರಾಡ್ ಕಾಣುವುದನ್ನು ತಾತ್ಕಾಲಿಕ ಸಿಮೆಂಟ್ ತೇಪೆ ಹಚ್ಚಿ ಮುಚ್ಚಲಾಗಿದೆ. ಬಿಸಿಲುಕಾಲದಲ್ಲಿ ಹೇಗೋ ಕಾಲ ಕಳೆದು ಮಳೆಗಾಲದಲ್ಲಿ ಮೇಲ್ಚಾವಣಿ ಸೋರುವ, ಮತ್ತು ಬಿರುಕು ಗೋಡೆಗಳಲ್ಲಿ ನೀರು ಇಳಿಕೆಯಾಗಿ ಗೋಡೆಗಳು ಪೂರ್ತಿ ತೇವಾಂಶ ಹೊಂದುವ ಕಟ್ಟಡದಲ್ಲಿ, ಸಬ್ ರಿಜಿಸ್ಟರ್ ಕಚೇರಿಯ ಸಿಬ್ಬಂದಿಯವರು ದೇವರ ಮೇಲೆ ಭಾರ ಹಾಕಿ ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದಾರೆ. ಕಟ್ಟಡದ ಈ ಸ್ಥಿತಿಯ ಕುರಿತು ಸಿಬ್ಬಂದಿಯವರಲ್ಲಿ ವಿಚಾರಿಸಿದರೆ, ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿರುವ ವಿಷಯದ ಕುರಿತು ಮಾಹಿತಿ ನೀಡಲಾಗಿದೆ ಎಂದು, ಹೆಚ್ಚು ಮಾತನಾಡದೆ ಸುಮ್ಮನಾಗುತ್ತಿದ್ದಾರೆ.
ವಿದ್ಯುತ್ ವಯರ್ ಗಳು ಅಸ್ತವ್ಯಸ್ತ :- ಕಚೇರಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ಯಾವಾಗಲೋ ಮಾಡಿದ್ದ ವಯರಿಂಗ್ ಅಸ್ತವ್ಯಸ್ತಗೊಂಡು ಹಳೆಯ ಬೋರ್ಡ್ಗಳು ಆಲುಗಾಡುತ್ತಿವೆ. ಕಟ್ಟಡಕ್ಕೆ ಮತ್ತು ಕಂಪ್ಯೂಟರ್ ಗಳಿಗೆ ಹೊಸದಾಗಿ ವಯರಿಂಗ್ ಮಾಡಿಸಬೇಕಿದೆ. ಕಚೇರಿಗೆ ಬರುವ ಸಾರ್ವಜನಿಕರಿಗೆ ತಮ್ಮ ಕೆಲಸ ಆಗುವವರೆಗೆ ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆ ಮಾಡಬೇಕಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಮಿನಿ ವಿಧಾನಸೌಧದಲ್ಲಿ ಕೆಲಸ ಕನಸು ಮಾತ್ರ: ಕುರುಗೋಡು ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದ ನಂತರ, ಕೆಲ ವರ್ಷಗಳಲ್ಲಿ ಪಟ್ಟಣದ ಕೋಳೂರುಕ್ರಾಸ್ ರಸ್ತೆಯಲ್ಲಿ, ಭವ್ಯವಾದ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದು ಕೆಲಸ ಪೂರ್ಣಗೊಂಡಿಲ್ಲ. ಈ ಭವ್ಯ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯನಿರ್ವಹಿಸುವ, ವಿವಿಧ ಇಲಾಖೆಗಳ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ಕನಸು ಮಾತ್ರ ನನಸಾಗದೆ ಉಳಿದಿದ್ದು. ಕೆಲವು ಇಲಾಖೆಯ ಕಚೇರಿಗಳು ಹಳೆಯ ಕಾಲದ, ಶಿಥಿಲಗೊಂಡ ಕಚೇರಿಗಳಲ್ಲಿ ಅನಿವಾರ್ಯದಿಂದ ಕಾರ್ಯನಿರ್ವಹಿಸುವಂತಾಗಿದೆ. ಸಂಬಂಧಿಸಿದ ಪ್ರಜಾಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಿನಿ ವಿಧಾನಸೌಧದ ಕೆಲಸ ಕೂಡಲೇ ಪೂರ್ಣಗೊಳಿಸಿ, ಸರ್ಕಾರಿ ಕಛೇರಿಗಳ ಕಾರ್ಯ ನಿರ್ವಹಿಸುವುದಕ್ಕೆ ಅನುಕೂಲ ಕಲ್ಪಿಸಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಹೇಳಿಕೆ: ಕಚೇರಿ ಕಟ್ಟಡದ ಗೋಡೆಗಳು ಬಿರುಕುಬಿಟ್ಟ ವಿಷಯ ಮತ್ತು ಸ್ಥಿತಿಯ ಕುರಿತು ಮಾಹಿತಿ ಒದಗಿಸಿದ್ದೇವೆ. ಮಿನಿಸೌಧ ಕಟ್ಟಡ ಪೂರ್ಣಗೊಂಡ ಬಳಿಕ ಕಚೇರಿ ಸ್ಥಾಳಂತರ ಆಗಬಹುದು. ತಾತ್ಕಾಲಿಕ ರಿಪೇರಿ ಆಗಲಿದೆ.. ಕಚೇರಿ ಸಿಬ್ಬಂದಿ ಕುರುಗೋಡು.
ಹೇಳಿಕೆ :- ಸಬ್ ರಿಜಿಸ್ಟರ್ ಕಚೇರಿಗೆ ಅಸ್ತಿಗಳ ನೋಂದಣಿಗೆ ಬಂದರೆ ಕುಟುಂಬ ಸಮೇತ ಬರಬೇಕು. ಅರ್ಧದಿನ ಅಥವಾ ದಿನಪೂರ್ತಿ ಇಲ್ಲಿ ಕಾಲ ಕಳೆಯಬೇಕು. ಕಚೇರಿಯಲ್ಲಿ ಮತ್ತು ಹೊರಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಬೇಕು.. ನೋಂದಣಿ ಕೆಲಸಕ್ಕೆ ಬಂದ ಸಾರ್ವಜನಿಕರು.

























