Home ಜಿಲ್ಲೆ ಮೈಸೂರು ಕನ್ನಡಕ್ಕೆ ಗೌರವ ತಂದುಕೊಟ್ಟವರು ರಾಜ್‍ಕುಮಾರ್

ಕನ್ನಡಕ್ಕೆ ಗೌರವ ತಂದುಕೊಟ್ಟವರು ರಾಜ್‍ಕುಮಾರ್

ಸಂಜೆವಾಣಿ ನ್ಯೂಸ್
ಮೈಸೂರು: ಏ.25:-
ಗೋಕಾಕ್ ಹೋರಾಟದಲ್ಲಿ ಭಾಗವಹಿಸಿ ಮಾತೃ ಭಾಷೆ ಕನ್ನಡಕ್ಕೆ ಗೌರವ ತಂದುಕೊಟ್ಟ ಮಹಾನ್ ಚೇತನ ಡಾ.ರಾಜಕುಮಾರ್ ಎಂದು ಶಾಸಕ ಕೆ.ಹರೀಶ್ ಗೌಡ ತಿಳಿಸಿದರು.
ಶುಕ್ರವಾರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ ವತಿಯಿಂದ ಡಾ.ರಾಜಕುಮಾರ್ ಜಯಂತಿ ಅಂಗವಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗವಿರುವ ರಾಜ್‍ಕುಮಾರ್ ಉದ್ಯಾನವನದಲ್ಲಿ ರಾಜ್ ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.


ಅಂದು ರಾಜ್‍ಕುಮಾರ್ ಅವರು ಗೋಕಾಕ್ ಚಳವಳಿಯ ಮೂಲಕ ನಡೆಸಿದ ಹೋರಾಟ ನಮ್ಮ ಮಾತೃಭಾಷೆಗೆ ಇಷ್ಟೊಂದು ಗೌರವ ಮತ್ತು ಬೆಲೆ ತಂದುಕೊಡಲು ಸಾಧ್ಯವಾಯಿತು. ಕನ್ನಡ ನಾಡು, ನುಡಿ ಎಂದರೆ ರಾಜ್ ಕುಮಾರ್ ಅವರಿಗೆ ಅತೀವ ಪ್ರೀತಿಯನ್ನು ಅವರು ನಟಿಸಿದ ಚಲನಚಿತ್ರಗಳಲ್ಲಿ ಮಾತ್ರವಲ್ಲ ಗೋಕಾಕ್ ಹೋರಾಟದಲ್ಲೂ ಕಾಣಬಹುದು. ಅವರಿಗೆ ಕನ್ನಡದ ಮೇಲಿದ್ದ ಅಭಿಮಾನ ಯುವಜನರಿಗೆ ಮಾದರಿಯಾಗಬೇಕು ಎಂದರು.


ರಾಜ್‍ಕುಮಾರ್ ಅವರು ನಟಿಸಿರುವ ಸಿನಿಮಾಗಳು ಮನರಂಜನೆಯ ಜತೆಗೆ ನೀತಿಪಾಠ ತಿಳಿಸುತ್ತವೆ. ಅವರ ಸಿನಿಮಾಗಳ ನೀತಿ ಪಾಠದಿಂದ ಬಹಳಷ್ಟು ಜನರು ತಮ್ಮ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಸಿನಿಮಾಗಳಲ್ಲಿದ್ದ ಸಂಭಾಷಣೆ ಮತ್ತು ಸಾಹಿತ್ಯದ ಸೊಗಡನ್ನು ಇಂದು ಬೇರೆ ಸಿನಿಮಾಗಳಲ್ಲಿ ಕಾಣಲು ಅಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಚಿತ್ರರಂಗದಲ್ಲಿ ಆಡು ಮುಟ್ಟದ ಸೊಪ್ಪಿಲ್ಲ, ಡಾ.ರಾಜ್‍ಕುಮಾರ್ ಅವರು ನಿರ್ವಹಿಸದ ಪಾತ್ರಗಳಿಲ್ಲ ಎನ್ನುವ ಮಾತಿದೆ. ನಟನೆಗೆ ಮಾತ್ರ ಸೀಮಿತವಾಗದೆ ಅವರ ಸಿರಿ ಕಂಠದಿಂದ ಹಾಡುಗಳನ್ನು ಹಾಡಿ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅಂದಿನ ಕಾಲದಲ್ಲೇ ಅವರು ತಮ್ಮ ಸಿನಿಮಾಗಳಲ್ಲಿ ಆಂಗ್ಲ ಭಾಷೆಯ ಹಾಡುಗಳನ್ನು ಹಾಡುತ್ತಿದ್ದರು ಎಂದು ಶ್ಲಾಘಿಸಿದರು.
ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಆಚರಿಸುತ್ತಿರುವುದು ನಮಗೆಲ್ಲರಿಗೂ ಸಂತೋಷದ ವಿಷಯ. ಮುಂದಿನ ವರ್ಷಗಳಲ್ಲಿ ಇನ್ನೂ ಅದ್ದೂರಿಯಾಗಿ ರಾಜ್‍ಕುಮಾರ್ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಿ ಎಂದು ಆಶಿಸಿದರು.


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ.ಎಸ್.ಹೆಚ್ ಮಾತನಾಡಿ, ಡಾ.ರಾಜ್ ಕುಮಾರ್ ಅವರು ಹಾಡಿರುವ ಹಾಡುಗಳು ರೋಮಾಂಚನ ಮೂಡಿಸುತ್ತವೆ. ಅವರ ನಟನೆಗೆ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದರೂ ಅಹಂಕಾರ ತೋರದೆ ಅಭಿಮಾನಿಗಳನ್ನು ದೇವರು ಎಂದು ಕರೆದರು. ಜೀವನ ಶೈಲಿ, ಶಿಸ್ತು, ಸಮಯಪಾಲನೆ, ಹಿರಿಯರಿಗೆ ಗೌರವ, ಮಾತೃ ಭಾಷೆಯ ಮೇಲಿನ ಭಕ್ತಿ ಅಣ್ಣಾವ್ರು ನಮಗೆ ಬಿಟ್ಟುಹೋಗಿರುವ ಆಸ್ತಿ ಎಂದರು.
ಡಾ;ರಾಜ್ ಕುಮಾರ್ ಕುರಿತು ಗೀತಗಾಯನ ಕಾರ್ಯಕ್ರಮವನ್ನು ಡಾ.ಲೋಹಿತ್ ಐ.ಡಿ ಅವರ ತಂಡದವರು ನಡೆಸಿಕೊಟ್ಟರು.


ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಗೋವಿಂದರಾಜು ಗೌರವ ಸಲಹೆಗಾರ ಸಿದ್ದಪ್ಪ, ಸ್ವಾಮಿ ಕಾರ್ಯದರ್ಶಿ ರಮೇಶ್, ಡಾ.ರಾಜ್ ಶಿವಸೈನ್ಯ ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಎನ್.ರವಿ, ಸದಸ್ಯರಾದ ಮಹೇಶ್, ದೊರೆ, ಮಂಜು ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.