Home ಜಿಲ್ಲೆ ಒಂಟಿ ಮಹಿಳೆಯರ ಮೇಲಿನ ಶೋಷಣೆ, ತಾರತಮ್ಯಗಳು ನಿಲ್ಲಲಿ

ಒಂಟಿ ಮಹಿಳೆಯರ ಮೇಲಿನ ಶೋಷಣೆ, ತಾರತಮ್ಯಗಳು ನಿಲ್ಲಲಿ

Oplus_131072

ಸಂಜೆವಾಣಿ ವಾರ್ತೆ

 ಹಗರಿಬೊಮ್ಮನಹಳ್ಳಿ :ಜು.14  ಮಹಿಳೆಯರನ್ನು ಪ್ರಸ್ತುತ ದಿನಗಳಲ್ಲೂ ಪುರುಷ ಪ್ರಧಾನ ವ್ಯವಸ್ಥೆಯ ಗುಲಾಮರನ್ನಾಗಿ ನೋಡಲಾಗುತ್ತಿದೆ. ಅವರ ಮೇಲಿನ ಶೋಷಣೆ, ತಾರತಮ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ ಎಂದು ಒಂಟಿ ಮಹಿಳೆಯರ ಸಂಘಟನೆಯ ರಾಜ್ಯ ಗೌರವ ಸಲಹೆಗಾರರಾಗಿ ಯು. ಬಸವರಾಜ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಸಮುದಾಯ ಭವನದಲ್ಲಿ ಸೋಮವಾರ  ಹಮ್ಮಿಕೊಳ್ಳಲಾಗಿದ್ದ ಒಂಟಿ ಮಹಿಳೆಯರ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಸಮಾಜದಲ್ಲಿ ಶಿಕ್ಷಣ ಹಾಗೂ ಆಸ್ತಿ ಹಕ್ಕು ಮತ್ತು ಮರು ಮದುವೆಯ ಹಕ್ಕುಗಳನ್ನು ವಂಚಿಸಿ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಮೂಲೆಗುಂಪು ಮಾಡಿ ಶೋಷಣೆ ಮಾಡಲಾಗುತ್ತಿದೆ. ಇಂತಹ ಸಾಮಾಜಿಕ ತಾರತಮ್ಯದ ವಿರುದ್ಧ ಹಾಗೂ ಬಡತನ, ಶೋಷಣೆ, ರಾಕ್ಷಸ ಕೃತ್ಯಗಳ ವಿರುದ್ಧ ಒಂಟಿ ಮಹಿಳೆಯರು ಸಂಘಟಿತರಾಗಿ ಹೋರಾಡಬೇಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಒಂಟಿ ಮಹಿಳೆಯರ ಪರವಾಗಿ ಅಂದೇ ಧ್ವನಿ ಎತ್ತಿದ್ದರು” ಎಂದು ನೆನಪಿಸಿಕೊಂಡರು. ಕೇಂದ್ರ ಸರ್ಕಾರವು ಒಂಟಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಕನಿಷ್ಠ ತಲಾ ₹೬೦೦೦ ಪಿಂಚಣಿ ನೀಡಬೇಕು. ಜೊತೆಗೆ ಉಚಿತ ಶಿಕ್ಷಣ, ಉದ್ಯೋಗ, ವಸತಿ ಸೌಲಭ್ಯ ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ರಕ್ಷಣೆ ನೀಡಲು ಬದ್ಧ ರಹಿತ ಕಾಯ್ದೆಯನ್ನು ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.

ರಾಜ್ಯ ಸಂಚಾಲಕರಾದ ಬಿ. ಮಾಳಮ್ಮ ಮಾತನಾಡಿ, “ಒಂಟಿ ಮಹಿಳೆಯರ ಜನಸಂಖ್ಯೆಯನ್ನು ಗುರುತಿಸಿ, ರಾಜ್ಯ ಸರ್ಕಾರವು ಮುಂಬರುವ ಬಜೆಟ್ನಲ್ಲಿ ಸೂಕ್ತ ಅನುದಾನ ಒದಗಿಸಬೇಕು. ಒಂಟಿ ಮಹಿಳೆಯರ ಪುನರ್ವಸತಿಗಾಗಿ ಶೇ. ೩೩ ರಷ್ಟು ಮೀಸಲಾತಿ ನೀಡಬೇಕು. ಒಂಟಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಒಂಟಿ ಮಹಿಳೆಯರ ವಿವಿಧ  ಬಾಕಿ ಇರುವ ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬರುವ ಜುಲೈ ೨೪ ರಂದು ಜಿಲ್ಲಾ ಮಟ್ಟದ ಬೃಹತ್ ಹೋರಾಟ ಮತ್ತು ಧರಣಿ ಹಮ್ಮಿಕೊಳ್ಳಲು ಸಮಾವೇಶದಲ್ಲಿ ತೀರ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಿಐಟಿಯು ಉಪಾಧ್ಯಕ್ಷರಾದ ಬಿ. ಬಸವರಾಜು, ತಾಲೂಕು ಅಧ್ಯಕ್ಷೆ ಗುರುಶಾಂತಮ್ಮ,ಮುಖಂಡ ಎಸ್ ಜಗನ್ನಾಥ, ಪಿ. ಚಾಂದ್ಬೀ . ರೇಣುಕಮ್ಮ, ವಿನೋದ, ಪ್ರೇಮ, ರಾಮಕ್ಕ, ಮಂಜಮ್ಮ, ಭಾಗ್ಯಮ್ಮ, ಮೂಗಮ್ಮ, ಹುಲಿಗೆಮ್ಮ, ಅಕ್ಕಮ್ಮ, ಮರಿಯಮ್ಮ, ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಒಂಟಿ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು.