
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.೧೧: ತುಂಗಭದ್ರಾ ಜಲಾಶಯದ ಬಲದಂಡೆಯ ಮೇಲ್ಮಟ್ಟದ ಕಾಲುವೆ (ಎಚ್ಎಲ್ಸಿ)ಗೆ ನವೆಂಬರ್ ೩೦ರವರೆಗೆ ಹಾಗೂ ಡಿಸೆಂಬರ್ ತಿಂಗಳಲ್ಲಿಯೂ ಆಂಧ್ರಪ್ರದೇಶದ ಪಾಲಿನ ನೀರು ಹರಿಸುವಂತೆ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ಆಂಧ್ರಪ್ರದೇಶದ ರಾಯದುರ್ಗ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಕಾಲುವ ಶ್ರೀನಿವಾಸ್ ಅವರಿಗೆ ಇಂದು ಮನವಿ ಸಲ್ಲಿಸಿದ್ದಾರೆ.
ನಗರದ ಇನ್ಫೆಂಟ್ರಿ ರಸ್ತೆಯಲ್ಲಿ ಖಾಸಗಿ ಕಾರ್ಯಕ್ರಮವೊಂದರ ಉದ್ಘಾಟನೆಗೆ ಆಗಮಿಸಿದ್ದ ಶಾಸಕ ಕಾಲುವ ಶ್ರೀನಿವಾಸ್ ಅವರನ್ನು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಭೇಟಿ ಮಾಡಿ ತುಂಗಭದ್ರಾ ಜಲಾಶಯದ ನೀರಿನ ಹಂಚಿಕೆ ಹಾಗೂ ಎಚ್ಎಲ್ಸಿ ಕಾಲುವೆಗೆ ನೀರು ಹರಿಸುವ ಅವಧಿಯನ್ನು ವಿಸ್ತರಿಸುವ ಕುರಿತು ಚರ್ಚಿಸಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶಾಸಕ ಕಾಲುವ ಶ್ರೀನಿವಾಸ್ , ಈ ವಿಷಯವಾಗಿ ಬಳ್ಳಾರಿ ಜಿಲ್ಲೆಯ ಶಾಸಕರು ಹಾಗೂ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಎರಡೂ ರಾಜ್ಯಗಳ ಪಾಲಿನ ನೀರು ಸಮರ್ಪಕವಾಗಿ ದೊರೆಯುವಂತೆ ಪ್ರಯತ್ನಿಸುವುದಾಗಿ ಭರವಸೆ ನೀಡದರು.
ಈ ಸಂದರ್ಭದಲ್ಲಿ ತಿಮ್ಮರಾಜು, ಕೃಷ್ಣನಗರ ಕ್ಯಾಂಪ್ನ ಶಿವಯ್ಯ, ಗಂಗಾವತಿಯ ವೀರೇಶ್, ಕೃಷ್ಣನಗರ ಕ್ಯಾಂಪ್ನ ಬಲರಾಮ, ಕಂಪ್ಲಿಯ ಸತ್ಯನಾರಾಯಣ, ಕೃಷ್ಣನಗರ ಕ್ಯಾಂಪ್ನ ರಾಮಕೃಷ್ಣ ಹಾಗೂ ಜಾಲಿಹಾಳ್ನ ಶ್ರೀಧರ್ ಗೌಡ ಸೇರಿದಂತೆ ತುಂಗಭದ್ರಾ ರೈತ ಸಂಘದ ಸದಸ್ಯರು ಉಪಸ್ಥಿತರಿದ್ದರು.





















