ಸಂಜೆವಾಣಿ ನ್ಯೂಸ್
ಮೈಸೂರು: ಜು.01:- ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪನ ವಾಸ್ತವವಾಗಿ ಶಿಕ್ಷಕರ ಮೌಲ್ಯಮಾಪನವೂ ಆಗಿರುತ್ತದೆ ಎಂದು ಸರ್ಕಾರಿ ಶಿಕ್ಷಕ ಮಹಾವಿದ್ಯಾಲಯದ ಪ್ರಾಂಶುಪಾಲೆ ಎಚ್.ಎನ್.ಗೀತಾಂಬ ತಿಳಿಸಿದರು.
ರಾಷ್ಟ್ರೀಯ ಪರೀಕ್ಷಣ ಸೇವೆ-ಭಾರತ, ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್), ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಇವುಗಳ ಸಹಯೋಗದಲ್ಲಿ ನಗರದ ಸಿಐಐಎಲ್ ಆವರಣದಲ್ಲಿರುವ ಪೂರ್ವವೀಕ್ಷಣೆ ರಂಗಮಂದಿರದಲ್ಲಿ ಅಂತಿಮ ವರ್ಷದ ಬಿ.ಎಡ್ ಪ್ರಶಿಕ್ಷಾಣಾರ್ಥಿಗಳಿಗಾಗಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಪರೀಕ್ಷಣ ಮತ್ತು ಮೂಲತತ್ವಗಳು ಎಂಬ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ಪಾಠ ಮಾಡಿದರೆ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಪ್ರಶ್ನೆ ಪತ್ರಿಕೆಯ ಬಹುತೇಕ ಎಲ್ಲಾ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಉತ್ತರಿಸಿ, ಉತ್ತೀರ್ಣರಾಗುತ್ತಾರೆ. ಒಂದು ವೇಳೆ ಶಿಕ್ಷಕರು ಉತ್ತಮ ರೀತಿಯಲ್ಲಿ ಪಾಠ ಪ್ರವಚನ ಮಾಡದೆ ಹೋದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಬಹು ಮಹತ್ವದ್ದಾಗಿದೆ ಎಂದು ತಿಳಿಸಿದರು.
ಭಾಷೆ ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಮಾಧ್ಯಮ. ಭಾಷೆಯಿಂದ ಎಲ್ಲಾ ವಿಚಾರಗಳನ್ನು ತಿಳಿಯಬಹುದು. ಆದ್ದರಿಂದ ವಿದ್ಯಾರ್ಥಿಗಳು ಅತ್ಯುತ್ತಮ ಸಂವಹನ ಕಲೆ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಶಿಕ್ಷಕ ಮಹಾವಿದ್ಯಾಲಯದ ಅಧ್ಯಾಪಕ ಡಿ.ಆರ್.ಅಮಿತ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಬೋಧನಾ ಪದ್ಧತಿಗಿಂತ ಪರೀಕ್ಷೆ ಮತ್ತು ಮೌಲ್ಯಮಾಪನದಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಉತ್ತೀರ್ಣರಾಗಿ ಗಣಿತ ಅಥವಾ ಇಂಗ್ಲಿಷ್ ಒಂದು ವಿಷಯದಲ್ಲಿ ಅನುತ್ತೀರ್ಣರಾದರು ಎಂಬ ಏಕೈಕ ಕಾರಣಕ್ಕೆ ಅವರ ಶೈಕ್ಷಣಿಕ ಜೀವನವನ್ನು ಮೊಟಕು ಗೊಳಿಸಲಾಗುತ್ತಿದೆ. ಇದರಿಂದ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಯಾವುದೋ ಒಂದು ವಿಷಯದಲ್ಲಿ ಅನುತ್ತೀರ್ಣರಾದ ಕಾರಣದಿಂದ ಅವರನ್ನು ಶಿಕ್ಷಣದಿಂದ ಹೊರದೂಡುವ ಬದಲು ಅವರಿಗೆ ಆಸಕ್ತಿ ಇರುವ ವಿಷಯದಲ್ಲಿಯೇ ಶಿಕ್ಷಣ ಪಡೆದು ಮುಂದುವರೆಯುವಂತೆ ಕ್ರಮ ವಹಿಸಬೇಕು. ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕೌಶಲ್ಯವನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ಹಿಂದಿ ಒಂದೇ ರಾಷ್ಟ್ರ ಭಾಷೆಯಲ್ಲ. ದೇಶದಲ್ಲಿರುವ ಎಲ್ಲಾ ಭಾಷೆಗಳೂ ರಾಷ್ಟ್ರ ಭಾಷೆಗಳೇ ಆಗಿವೆ ಎಂದು ಅವರು ತಿಳಿಸಿದರು.
ಸಿಐಐಎಲ್ನ ಉಪನ್ಯಾಸಕ ಎಲ್.ಆರ್.ಪ್ರೇಮ್ ಕುಮಾರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕ-ಪುಸ್ತಕ, ಪರೀಕ್ಷೆ-ಮೌಲ್ಯಮಾಪನ ಬಹಳ ಮುಖ್ಯ. ಈ ನಾಲ್ಕು ಅಂಶಗಳು ಅತ್ಯಂತ ಯಶಸ್ವಿಯಾಗಿ ಸಾಗಿದರೆ ವಿದ್ಯಾರ್ಥಿಗಳು ಪ್ರಗತಿ ಹೊಂದುತ್ತಾರೆ ಎಂದು ತಿಳಿಸಿದರು.
ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್) ಉಪ ನಿರ್ದೇಶಕ ಪೆÇ್ರ.ಪಿ.ಆರ್.ಡಿ.ಫೆರ್ನಾಂಡಿಸ್, ರಾಷ್ಟ್ರೀಯ ಪರೀಕ್ಷಣ ಸೇವೆ-ಭಾರತದ ಪ್ರಭಾರ ಅಧಿಕಾರಿ ಪಂಕಜ್ ದ್ವಿವೇದಿ ಮತ್ತಿತರರು ಉಪಸ್ಥಿತರಿದ್ದರು.