ಹೃದಯಾಘಾತಕ್ಕೆ ಗ್ರಾ.ಪಂ. ಸದಸ್ಯ, ವಿದ್ಯಾರ್ಥಿ ಬಲಿ

ತುಮಕೂರು, ಜು. ೧- ತಾಲ್ಲೂಕಿನ ಊರುಕೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ನೀಲಕಂಠಸ್ವಾಮಿ (೩೭) ಅವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಾಲ್ಲೂಕಿನ ಹೆಬ್ಬಾಕ ಗ್ರಾಮದ ನಿವಾಸಿಯಾಗಿರುವ ನೀಲಕಂಠಸ್ವಾಮಿ ಅವರು ಮನೆಯಲ್ಲಿ ಎಂದಿನಂತೆ ಓಡಾಡುತ್ತಿದ್ದಾಗ ಬೆಳಿಗ್ಗೆ ೮.೩೦ ರಲ್ಲಿ ದಿಢೀರ್ ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡ ಕುಟುಂಬದವರು ಹಾಗೂ ಸ್ನೇಹಿತರು ತಕ್ಷಣ ಇವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಗ್ರಾ.ಪಂ. ಸದಸ್ಯ ನೀಲಕಂಠಸ್ವಾಮಿ ಅವರು ಪತ್ನಿ, ಪುತ್ರಿ, ತಂದೆ, ತಾಯಿ, ಕುಟುಂಬದವರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ರವರ ಸಹೋದರನ ಪುತ್ರರಾಗಿರುವ ನೀಲಕಂಠಸ್ವಾಮಿ ಅವರು ಗ್ರಾ.ಪಂ. ಚುನಾವಣೆಯಲ್ಲಿ ಹೆಬ್ಬಾಕದಿಂದ ಸ್ಪರ್ಧಿಸಿ ಊರುಕೆರೆ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ೨ನೇ ಅವಧಿಗೆ ಅಧ್ಯಕ್ಷರಾಗಿಯೂ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದರು.
ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ಶ್ರೀಯುತರ ಅಗಲಿಕೆಯಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಸಂತಾಪ
ಗ್ರಾ.ಪಂ. ಸದಸ್ಯ ನೀಲಕಂಠಸ್ವಾಮಿಯವರ ನಿಧನಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ, ಶಾಸಕರಾದ ಬಿ. ಸುರೇಶ್‌ಗೌಡ, ಜ್ಯೋತಿಗಣೇಶ್, ಮಾಜಿ ಸಂಸದ ಜಿ.ಎಸ್. ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಊರುಕೆರೆ ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಬೆನ್ನಲ್ಲೆ ತುಮಕೂರು ಜಿಲ್ಲೆಯಲ್ಲಿ ಯುವ ಗ್ರಾ.ಪಂ. ಸದಸ್ಯರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ಹೃದಯಾಘಾತದಿಂದ ಪದವಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ಹೊರವಲಯ ಬಸವನಗಂಗೂರು ಗ್ರಾಮದಲ್ಲಿ ನಡೆದಿದೆ.

ಶ್ರೀನಿಧಿ (೨೦) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ನಗರದ ಡಿವಿಎಸ್ ಕಾಲೇಜ್ ನಲ್ಲಿ ಅಂತಿಮ ಪದವಿ ಅಭ್ಯಾಸ ಮಾಡುತ್ತಿದ್ದ.

ಭಾನುವಾರ ಮುಂಜಾನೆ ಶ್ರೀನಿಧಿ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡಿದ್ದು, ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ.

ಹೃದಯಾಘಾತ ಹಾಗೂ ನ್ಯೂಮೋನಿಯಾದಿಂದ ಶ್ರೀನಿಧಿ ಮೃತಪಟ್ಟಿದ್ಧಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎಂದು ಬಸವನಗಂಗೂರು ಗ್ರಾಮದ ನಿವಾಸಿ ಪ್ರಸನ್ನರವರು ಮಾಹಿತಿ ನೀಡಿದ್ದಾರೆ.

ಲವಲವಿಕೆಯಿಂದಿದ್ದ ಯುವಕ ಶ್ರೀನಿಧಿಯ ಅಕಾಲಿಕ ನಿಧನ ಗ್ರಾಮದಲ್ಲಿ ಶೋಕದ ವಾತಾವರಣ ಉಂಟು ಮಾಡಿದೆ. ಮೃತರ ಆತ್ಮಕ್ಕೆ ಭಗವಂತ ಚಿರಃಶಾಂತಿ ಕರುಣಿಸಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ.