Home ಜಿಲ್ಲೆ ವಿದ್ಯುತ್ ಅವಘಡದಲ್ಲಿ ಯುವಕ ಸಾವು; ಕುಟುಂಬಕ್ಕೆ 5 ಲಕ್ಷ ಪರಿಹಾರದ ಚೆಕ್ ವಿತರಿಸಿದ ಶಾಸಕ ಡಾ....

ವಿದ್ಯುತ್ ಅವಘಡದಲ್ಲಿ ಯುವಕ ಸಾವು; ಕುಟುಂಬಕ್ಕೆ 5 ಲಕ್ಷ ಪರಿಹಾರದ ಚೆಕ್ ವಿತರಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬರೂರ ಗ್ರಾಮದ ರೋಷನ್ ಎಂಬ ಯುವಕ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ದುರ್ಘಟನೆಗೆ ಸಂಬಂಧಿಸಿದಂತೆ, ಮೃತ ಯುವಕನ ಕುಟುಂಬಕ್ಕೆ ಜೆಸ್ಕಾಂ ಇಲಾಖೆಯ ವತಿಯಿಂದ 5 ಲಕ್ಷ ಪರಿಹಾರ ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮೃತ ಯುವಕನ ತಾಯಿಗೆ 5 ಲಕ್ಷ ಮೊತ್ತದ ಪರಿಹಾರದ ಚೆಕ್ ವಿತರಿಸಿದರು.

ಬೀದರ್ ನಗರದ ಪ್ರತಾಪ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಪರಿಹಾರದ ಚೆಕ್ ವಿತರಿಸಿ, ಮೃತ ಯುವಕನ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದರು. ಮಗನನ್ನು ಕಳೆದುಕೊಂಡ ತಾಯಿಯ ನೋವಿನಲ್ಲಿ ಭಾಗಿಯಾದ ಶಾಸಕರು, ಕುಟುಂಬದ ಸಂಕಷ್ಟದ ಸಂದರ್ಭದಲ್ಲಿ ಧೈರ್ಯ ತುಂಬಿ, ಸಾಂತ್ವನ ಹೇಳಿದರು.

ವಿದ್ಯುತ್ ಅವಘಡದಿಂದ ಯುವಕನ ಅಕಾಲಿಕ ಸಾವು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಇಂತಹ ಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಮೂಲಕ ದೊರೆಯಬೇಕಾದ ಪರಿಹಾರ ಮತ್ತು ನೆರವು ತಲುಪಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜೆಸ್ಕಾಂ ಇಲಾಖೆಯ ವತಿಯಿಂದ ಮಂಜೂರಾದ ಪರಿಹಾರದ ಮೊತ್ತವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಮೃತ ಯುವಕ ರೋಷನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಶಾಸಕರು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಜೆಸ್ಕಾಂ ಎಇಇ ಶಶಿರೇಖಾ ಪಾಟೀಲ, ಅಧಿಕಾರಿ ಎಂ.ಡಿ. ಶಯಿದ್, ಮುಖಂಡರಾದ ಅನೀಲಕುಮಾರ ಪನ್ನಾಳೆ, ಶಿವಕುಮಾರ ಸ್ವಾಮಿ, ಬಾಬುರಾವ ಕಾರಬಾರಿ, ದಯಾನಂದ ರೆಡ್ಡಿ, ರಾಜಕುಮಾರ ಪಾಟೀಲ್, ಶಿವಶರಣಪ್ಪ ತಗಾರೆ, ದೇವೇಂದ್ರ ಚಾಂಗಲೇರಾ, ಇಂದ್ರಾರೆಡ್ಡಿ, ಉಲ್ಲಾಸ ರೆಡ್ಡಿ, ಸಂತೋಷ, ಶ್ರೀನಿವಾಸ, ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.