
ಕಲಬುರಗಿ, ಮೇ. 30 : ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ, ತಂಬಾಕು ಸೇವನೆಯ ದುಷ್ಪರಿಣಾಮಗಳು ಮತ್ತು ಕ್ಯಾನ್ಸರ್ಗೂ ತಂಬಾಕಿಗೂ ಇರುವ ಬಲವಾದ ಸಂಬಂಧದ ಬಗ್ಗೆ ಜಾಗೃತಿ ಮೂಡಿಸಲು ಕಲಬುರಗಿಯ ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯು ವಿಶೇಷ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳ ಹೆಚ್ಚಳ, ತಡೆಗಟ್ಟುವಿಕೆ, ಆರಂಭಿಕ ಹಂತದ ರೋಗ ಪತ್ತೆ, ಸಕಾಲಿಕ ಚಿಕಿತ್ಸೆ ಮತ್ತು ಆರೋಗ್ಯಕರ ಜೀವನಶೈಲಿಯ ಪ್ರಾಮುಖ್ಯತೆಯನ್ನು ಚರ್ಚಿಸಲು ಖ್ಯಾತ ಕ್ಯಾನ್ಸರ್ ತಜ್ಞರು, ಆರೋಗ್ಯ ವೃತ್ತಿಪರರು ಮತ್ತು ಮಾಧ್ಯಮ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಲಬುರಗಿಯ ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಬಾಯಿ, ಗಂಟಲು ಮತ್ತು ಶ್ವಾಸಕೋಶದ ಕ್ಯಾನ್ಸರ್ಗಳು ಸೇರಿದಂತೆ ತಂಬಾಕು ಬಳಕೆಯಿಂದ ಉಂಟಾಗುವ ದೀರ್ಘಕಾಲೀನ ಆರೋಗ್ಯದ ಅಪಾಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕುರಿತು ಗಮನಹರಿಸಲಾಯಿತು. ತಂಬಾಕು ಸೇವನೆಯು ಕ್ಯಾನ್ಸರ್ಗೆ ತಡೆಗಟ್ಟಬಹುದಾದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ತಜ್ಞರು ಒತ್ತಿಹೇಳಿದರು. ಅಲ್ಲದೆ, ಬಲವಾದ ಜಾಗೃತಿ ಕಾರ್ಯಕ್ರಮಗಳು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳ ತುರ್ತು ಅಗತ್ಯವಿದೆ ಎಂಬುದನ್ನು ಎತ್ತಿತೋರಿಸಿದರು.
ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳಲ್ಲಿ, ಆರಂಭಿಕ ಹಂತದಲ್ಲಿ ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ, ರೋಗ ಪತ್ತೆ ವಿಳಂಬವಾಗುತ್ತಿದ್ದು, ಕ್ಯಾನ್ಸರ್ ನಿರ್ವಹಣೆಯಲ್ಲಿ ಇದು ಈಗಲೂ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ತಜ್ಞರು ವಿವರಿಸಿದರು. ಮುನ್ನೆಚ್ಚರಿಕಾ ಆರೋಗ್ಯ ರಕ್ಷಣೆಯ ಬಗ್ಗೆ ಜನರು ಹೆಚ್ಚು ಜಾಗೃತರಾಗಬೇಕು, ಆರಂಭಿಕ ಎಚ್ಚರಿಕೆ ಲಕ್ಷಣಗಳನ್ನು ಗುರುತಿಸಬೇಕು ಮತ್ತು ಅಗತ್ಯವಿದ್ದಾಗ ಸಕಾಲದಲ್ಲಿ ವೈದ್ಯಕೀಯ ನೆರವು ಪಡೆಯಬೇಕು ಎಂದು ಈ ಗೋಷ್ಠಿಯ ಮೂಲಕ ಕರೆ ನೀಡಲಾಯಿತು.
ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಮತ್ತು ರೇಡಿಯೇಷನ್ ಮತ್ತು ಕ್ಲಿನಿಕಲ್ ಆಂಕೊಲಾಜಿಯ ಸೀನಿಯರ್ ಕನ್ಸಲ್ವೆಂಟ್ ಡಾ. ಶಾಂತಲಿಂಗ ನಿಗುಡಗಿ ಮಾತನಾಡಿ, “ದೇಶದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳಿಗೆ ತಂಬಾಕು ಸೇವನೆಯೇ ಅತಿದೊಡ್ಡ ಕಾರಣಗಳಲ್ಲಿ ಒಂದಾಗಿದೆ. ತೀವ್ರವಾದ ರೋಗಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಅನೇಕರು ತಂಬಾಕಿನಿಂದ ಉಂಟಾಗುವ ದೀರ್ಘಕಾಲೀನ ಹಾನಿಯನ್ನು ಕಡೆಗಣಿಸುತ್ತಾರೆ. ಮುನ್ನೆಚ್ಚರಿಕಾ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವಂತೆ ಜನರನ್ನು ಪ್ರೇರೇಪಿಸುವುದು, ಆರಂಭಿಕ ರೋಗ ಪತ್ತೆಯ ಪ್ರಾಮುಖ್ಯತೆಯನ್ನು ವಿವರಿಸುವುದು ಮತ್ತು ಆರೋಗ್ಯಕರ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವುದು ಈ ಜಾಗೃತಿ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ” ಎಂದು ತಿಳಿಸಿದರು.
ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಸರ್ಜಿಕಲ್ ಅಂಕೊಲಾಜಿಯ ಸೀನಿಯರ್ ಕನ್ಸಲೆಂಟ್ ಡಾ. ಶರಣಬಸಪ್ಪ ಹಟ್ಟಿ
ಅವರು ಮಾತನಾಡಿ, ”ತಂಬಾಕು ಸಂಬಂಧಿತ ಕ್ಯಾನ್ಸರ್ಗೆ ತುತ್ತಾದ ಹೆಚ್ಚಿನ ಸಂಖ್ಯೆಯ ರೋಗಿಗಳು ಕೊನೆಯ (ಅಡ್ವಾನ್ಸ್ಡ್ ಹಂತದಲ್ಲಿ ಆಸ್ಪತ್ರೆಗಳನ್ನು ಸಂಪರ್ಕಿಸುತ್ತಾರೆ. ಇದು ಚಿಕಿತ್ಸೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ಸಕಾಲಿಕ ರೋಗನಿರ್ಣಯ ಮತ್ತು ವೈದ್ಯಕೀಯ ಚಿಕಿತ್ಸೆಯು ರೋಗಿಯ ಗುಣಮುಖರಾಗುವ ಹಾಗೂ ಬದುಕುಳಿಯುವ ಪ್ರಮಾಣವನ್ನು ಗಣನೀಯವಾಗಿ ಸುಧಾರಿಸುವುದರಿಂದ, ಸಮುದಾಯ ಮಟ್ಟದಲ್ಲಿ ಜನರಿಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ” ಎಂದು ಹೇಳಿದರು.
ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಮೆಡಿಕಲ್ ಅಂಕೊಲಾಜಿ ವಿಭಾಗದ ಸೀನಿಯರ್ ಕನ್ಸಲ್ವೆಂಟ್ ಡಾ. ನಂದೀಶ್ ಕುಮಾರ್ ಮಾತನಾಡಿ, “ಕ್ಯಾನ್ಸರ್ ಅನ್ನು ಆರಂಭದಲ್ಲೇ ತಡೆಗಟ್ಟುವುದು ಜಾಗೃತಿ ಮತ್ತು ಜವಾಬ್ದಾರಿಯುತ ಜೀವನಶೈಲಿಯ ಆಯ್ಕೆಗಳೊಂದಿಗೆ ಪ್ರಾರಂಭವಾಗುತ್ತದೆ. ತಂಬಾಕು ಸೇವನೆಯನ್ನು ತ್ಯಜಿಸುವುದು. ದೈನಂದಿನ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ವ್ಯಸನದಿಂದ ಉಂಟಾಗುವ ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದು ಕ್ಯಾನ್ಸರ್ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಸಮುದಾಯದವರಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸುತ್ತವೆ” ಎಂದರು.
ಕ್ಯಾನ್ಸರ್ ಪತ್ತೆ, ಚಿಕಿತ್ಸಾ ತಂತ್ರಜ್ಞಾನಗಳು ಮತ್ತು ಮಡಿಸಿಪ್ಲಿನರಿ ಆರೈಕೆ ವಿಧಾನಗಳಲ್ಲಿನ ಪ್ರಗತಿಯು ರೋಗಿಗಳು ಶೀಘ್ರ ಗುಣಮುಖರಾಗಲು ಮತ್ತು ಅವರ ಜೀವನದ ಗುಣಮಟ್ಟವನ್ನು ಹೇಗೆ ಸುಧಾರಿಸುತ್ತಿದೆ ಎಂಬುದರ ಕುರಿತು ತಜ್ಞರು ಚರ್ಚಿಸಿದರು. ರೋಗಲಕ್ಷಣಗಳ ಮೊದಲ ಸುಳಿವು ಸಿಕ್ಕ ತಕ್ಷಣ ಚಿಕಿತ್ಸೆಯನ್ನು ವಿಳಂಬ ಮಾಡದೆ ವೈದ್ಯರನ್ನು ಸಂಪರ್ಕಿಸಲು ಜನರನ್ನು ಪೆÇ್ರೀತ್ಸಾಹಿಸುವ ಮಹತ್ವದ ಕುರಿತು ಈ ಗೋಷ್ಠಿಯು ಗಮನ ಸೆಳೆಯಿತು.
ವಿಶ್ವ ತಂಬಾಕು ರಹಿತ ದಿನಾಚರಣೆಯ ಸಂದರ್ಭದಲ್ಲಿ ತಂಬಾಕು-ಸಂಬಂಧಿತ ರೋಗಗಳ ಪ್ರಮಾಣವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಕ್ಯಾನ್ಸರ್ ಜಾಗೃತಿ, ಮುನ್ನೆಚ್ಚರಿಕಾ ಆರೈಕೆ ಮತ್ತು ನಮುದಾಯ ಶಿಕ್ಷಣ ಕಾರ್ಯಕ್ರಮಗಳನ್ನು ಉತ್ತೇಜಿಸುವತ್ತ ಕಲಬುರಗಿಯ ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯು ತನ್ನ ಬದ್ಧತೆಯನ್ನು ಪುನರುಚ್ಚರಿಸಿತು. ಸುಧಾರಿತ ವೈದ್ಯಕೀಯ ಪರಿಣತಿ, ಅತ್ಯಾಧುನಿಕ ತಂತ್ರಜ್ಞಾನ-ಚಾಲಿತ ಚಿಕಿತ್ಸೆ ಮತ್ತು ರೋಗಿ-ಸ್ನೇಹಿ ಬೆಂಬಲ ವ್ಯವಸ್ಥೆಗಳ ಮೂಲಕ ಸಮಗ್ರ ಕ್ಯಾನ್ಸರ್ ಆರೈಕೆಯನ್ನು ತಲುಪಿಸುವ ನಿಟ್ಟಿನಲ್ಲಿ ಆಸ್ಪತ್ರೆಯು ಮಾಡುತ್ತಿರುವ ನಿರಂತರ ಪ್ರಯತ್ನಗಳನ್ನು ಈ ಉಪಕ್ರಮವು ಪ್ರತಿಬಿಂಬಿಸುತ್ತದೆ.
























