Home ಜಿಲ್ಲೆ ಬೆಂಗಳೂರು ಭೂ ಮಾಪಕರ ಸಂಘದಿಂದ ಕಾಲ್ನಡಿಗೆ ಜಾಥ

ಭೂ ಮಾಪಕರ ಸಂಘದಿಂದ ಕಾಲ್ನಡಿಗೆ ಜಾಥ

ಕೋಲಾರ,ಮೇ,೬- ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಗರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಎಂಜಿ ರಸ್ತೆಯಲ್ಲಿ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮೆಕ್ಕೆ ವೃತ್ತದಲ್ಲಿ ಮಾನವ ಸರಪಣಿ ನಿರ್ಮಿಸಿ, ಜಿಲ್ಲಾಡಳಿತ ಭವನದವರಗೆ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.


ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಪರವಾನಗಿ ಭೂ ಮಾಪಕರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆ ರ್ಯಾಲಿ ಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಭೂ ದಾಖಲೆಗಳ ಉಪನಿರ್ದೇಶಕ ಬಿ.ಕೆ.ಸಂಜಯ್ ರವರಿಗೆ ಮನವಿ ಪತ್ರ ಸಲ್ಲಿಸಿದರು.


ಈ ವೇಳೆ ಪರವಾನಗಿ ಭೂ ಮಾಪಕರ ಸಂಘದ ರಾಜ್ಯ ಗೌರವಾಧ್ಯಕ್ಷ ಕೆ.ಪಿ.ಭಾರ್ಗವ ಮಾತನಾಡಿ, ಸರ್ಕಾರಿ ಪರವಾನಗಿ ಭೂಮಾಪಕರಾದ ನಾವು ಸುಮಾರು ೨೩ ವಷಗಳಿಂದ ಸತತವಾಗಿ ರೈತರು ಮತ್ತು ಸರ್ಕಾರದ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದು, ಇಲಾಖೆಗೆ ಹೆಸರು ತರುವಲ್ಲಿ ಯಶಸ್ವಿಯಾಗಿದ್ದೇವೆ. ಈಗ ವಯೋಮಿತಿ ಕಳೆದುಕೊಂಡಿದ್ದು, ಭೂಮಾಪಕರ ಕೆಲಸವನ್ನು ಬಿಟ್ಟು, ಬೇರೆ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ನಮ್ಮ ಸೇವೆಯನ್ನು ಪರಿಗಣಿಸಿ, ಸರ್ಕಾರಿ ಭೂಮಾಪಕರ ಹುದ್ದೆಯಲ್ಲಿ ವಿಲೀನಗೊಳಿಸಬೇಕು, ಇಲ್ಲವಾದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆಯೂ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೂ ಸಹ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಸ್ಪಂದಿಸುತ್ತಿಲ್ಲಾ ಎಂದು ಬೇಸರ ವ್ಯಕ್ತಪಡಿಸಿದರು.


ಪರವಾನಗಿ ಭೂಮಾಪಕರಾದ ನಾವು ಇಂದು ಸರ್ಕಾರಿ ಭೂಮಾಪಕರು ನಿರ್ವಹಿಸುವ ಎಲ್ಲಾ ತರಹದ ಕೆಲಸ ಕಾರ್ಯಗಳನ್ನು ಇಲಾಖೆ ಮತ್ತು ಸರ್ಕಾರ ಹೇಳಿದಂತೆ ನಿರ್ವಹಿಸುತ್ತಿದ್ದು, ೧೧ಇ, ತತ್ಕಾಲ್ ಪೋಡಿ, ಆಲಿನೇಷನ್, ಹದ್ದುಬಸ್ತು, ನ್ಯಾಯಾಲಯದ ಪ್ರಕರಣಗಳು, ಇ-ಸ್ವತ್ತು, ಪಿಎಂಜಿಎ, ಸ್ವಾಮಿತ್ವ ಸಮೀಕ್ಷೆ, ಆಕಾರಬಂದ್, ಡಾಟಾ ಎಂಟ್ರಿ, ದರಖಾಸ್ತು ಪೋಡಿ, ಕೆರೆಗಳ ಅಳತೆ, ನಾಲಾ ಅಳತೆ, ವಿದ್ಯುತ್ ಲೈನ್ ಅಳತೆ, ಮುಜರಾಯಿ ದೇವಸ್ಥಾನಗಳ ಅಳತೆ, ರಾಷ್ಟ್ರೀಯ ಹೆದ್ದಾರಿಗಳ ನಕ್ಷೆ ಸ್ವಾಮಿತ್ವ, ಗ್ರಾಮ ಠಾಣಾ, ವಕ್ಫ್ ಬೋರ್ಡ್, ನೀರಾವರಿ ಕಾಲುವೆ ಮುಂತಾದ ಅಳತೆಗಳನ್ನು ನಿರ್ವಹಿಸುತ್ತಿದ್ದು, ಯಾವುದೇ ಭದ್ರತೆ ಇಲ್ಲದೇ, ಸೇವಾ ಆಧಾರವಿಲ್ಲದೇ, ಕನಿಷ್ಠ ಸೇವಾ ಶುಲ್ಕವನ್ನು ಪಡೆದು ಜೀವನ ನಡೆಸುತ್ತಿದ್ದೇವೆ. ಆದ್ದರಿಂದ ಇಲಾಖೆ ಮತ್ತು ಸರ್ಕಾರ ನಿಗಧಿಮಾಡಿರುವ ಸೇವಾ ಶುಲ್ಕ ಅವೈಜ್ಞಾನಿಕವಾಗಿದ್ದು, ನಮ್ಮ ಸ್ಥಿತಿ ಜೀತದಾಳುಗಳ ಪರಿಸ್ಥಿತಿಗಿಂತ ಕನಿಷ್ಠವಾಗಿರುವುದರಿಂದ ನಾವು ಕೆಲಸ ನಿರ್ವಹಿಸಲು ಮತ್ತು ಜೀವನ ನಡೆಸಲು ಆಗದೇ ಇರುವಂತಹ ಪರಿಸ್ಥಿತಿಗೆ ಬಂದು ತಲುಪಿದ್ದೇವೆ ಎಂದರು.


ಸರ್ಕಾರ ದಿನ ಕಳೆದಂತೆ ಕೆಲಸದ ಒತ್ತಡ, ಜವಾಬ್ದಾರಿಗಳನ್ನು ಹೆಚ್ಚಿಸುತ್ತಲೇ ಇದೇ. ಆದರೆ ಪರವಾನಗಿ ಭೂವಾಪಕರಿಗೆ ತಿಂಗಳಿಗೆ ಸಂಬಳ ಮತ್ತು ಸವಲತ್ತು ಮಾತ್ರ ಶೂನ್ಯವಾಗಿದೆ. ಪೂರ್ಣ ಸ್ಕೆಚ್ ಆಗುವ ಕಡತಕ್ಕೆ ೧೨೦೦ ರೂ.ಮಾತ್ರ ನೀಡಲಾಗುತ್ತಿದೆ. ಶ್ರಮವಹಿಸಿ ಕೆಲಸ ಮಾಡಿ ಕಾರಣಾಂತರಗಳಿಂದ ಸ್ಕೆಚ್ ಆಗದ ಕಡತಕ್ಕೆ ಕೇವಲ ೩೬೦ ರೂ. ಮಾತ್ರ ನೀಡಲಾಗುತ್ತಿದೆ. ಅದರಲ್ಲೂ ಇಲಾಖೆ ವಿಳಂಬವಾಗಿ ಹಣ ಪಾವತಿ ಮಾಡುತ್ತದೆ. ಸರ್ಕಾರ ಕೂಡಲೇ ಪರವಾನಗಿ ಭೂಮಾಪಕರನ್ನು ಸರ್ಕಾರಿ ಭೂ ಮಾಪಕನ್ನಾಗಿ ಖಾಯಂ ನೇಮಕಾತಿಗೊಳಿಸಿ ಸಮಾನ ಕೆಲಸ ಮತ್ತು ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಎರಡು ತಿಂಗಳುಗಳಿಂದ ಕರ್ತವ್ಯ ನಿರ್ವಹಿಸುತ್ತಿಲ್ಲ, ಕೂಡಲೇ ನಮಗೆ ಸೇವಾ ಭದ್ರತೆ, ಜೀವನ ಭದ್ರತೆ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಇಲಾಖೆಯ ಸರ್ಕಾರಿ ಭೂಮಾಪಕರ ಹುದ್ದೆಯಲ್ಲಿ ವಿಲೀನಗೊಳಿಸಿ ಸಾವಿರಾರು ಕುಟುಂಬಗಳ ನಿರ್ವಹಣೆಗೆ ಅನುವು ಮಾಡಿಕೊಡಬೇಕಾಗಿ ಸರ್ಕಾರವನ್ನು ವಿನಂತಿಸಿದರು.


ಪರವಾನಗಿ ಭೂ ಮಾಪಕರ ಸಂಘದ ಜಿಲ್ಲಾಧ್ಯಕ್ಷ ಕೆ.ಶಿವಾನಂದ ಮಾತನಾಡಿ, ಸರ್ಕಾರದ ಪರವಾನಗಿ ಪಡೆದು ಸೇವೆ ಸಲ್ಲಿಸುತ್ತಿರುವ ಭೂ ಮಾಪಕರಿಗೆ ಸೇವಾ ಭದ್ರತೆ ಇಲ್ಲ. ಸರ್ಕಾರಿ ಭೂ ಮಾಪಕರಂತೆ ಸಮಾನ ಕೆಲಸ ಮಾಡುತ್ತಿರುವ ನಮಗೆ ಸಮಾನ ವೇತನ ನೀಡಬೇಕು. ಜೊತೆಗೆ ಸೇವೆ ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.


ಸರ್ಕಾರ ಪರವಾನಗಿ ನೀಡಿ ಭೂ ಮಾಪಕರ ನೇಮಕಗೊಳಿಸಿದೆ. ಫೈಲ್ ಆಧಾರದಲ್ಲಿ ಸೇವಾ ಶುಲ್ಕ ನೀಡಲಾಗುತ್ತಿದೆ. ಕೆಲವು ವರ್ಷಗಳಿಂದ ಇದರಿಂದ ಆದಾಯ ಕುಂಟಿತವಾಗುತಿದ್ದು, ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಈ ಕುರಿತು ಕಂದಾಯ ಇಲಾಖೆ ಹಾಗೂ ಸಚಿವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಈ ಪ್ರತಿಭಟನಾ ರ್‍ಯಾಲಿಯಲ್ಲಿ ಅಖಿಲ ಕರ್ನಾಟಕ ಪರವಾನಗಿ ಭೂ ಮಾಪಕರ ಸಂಘದ ಉಪಾಧ್ಯಕ್ಷ ಪ್ರಸನ್ನಕುಮಾರ್, ಕಾರ್ಯದರ್ಶಿ ಸಿದ್ದರಾಜು, ಪದಾಧಿಕಾರಿಗಳಾದ ಷಣ್ಮುಗ, ದ್ವಾರಕೀಶ್, ಬಚ್ಚೆಗೌಡ, ರಾಜಣ್ಣ ತುಮಕೂರು ಅಧ್ಯಕ್ಷ ನಾಗೇಶ್, ಮೈಸೂರು ಅಧ್ಯಕ್ಷ ಪ್ರಾಣೇಶ್, ರಾಮನಗರ ಅಧ್ಯಕ್ಷ ನವಕೋಟಿ, ಬೆಂಗಳೂರು ನಗರ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಬೆಂ ಗ್ರಾಮಾಂತರ ವೆಂಕಟರೆಡ್ಡಿ, ವಿಜಯ ನಗರ ಅಧ್ಯಕ್ಷ ಮಹಲಿಂಗಪ್ಪ, ಶಿವಮೊಗ್ಗ ಅಧ್ಯಕ್ಷ ಶಶಿ, ಕೋಲಾರ ಜಿಲ್ಲಾ ಉಪಾಧ್ಯಕ್ಷ ನರಸಿಂಹಮೂರ್ತಿ, ಕೋಲಾರ ತಾಲೂಕು ಅಧ್ಯಕ್ಷ ವಸಂತ್ ಕುಮಾರ್, ಮಾಲೂರು ಅಧ್ಯಕ್ಷ ಚೆಲುವಯ್ಯ ಸ್ವಾಮಿ, ಬಂಗಾರಪೇಟೆ ಅಧ್ಯಕ್ಷ ಪಾಂಡುರಂಗಯ್ಯ, ಮುಳಬಾಗಿಲು ಅಧ್ಯಕ್ಷ ಸೋಮಶೇಖರಯ್ಯ, ಶ್ರೀನಿವಾಸಪುರ ಅಧ್ಯಕ್ಷ ವೇಣು ಹಾಗೂ ಸೇರಿದಂತೆ ೩೧ ಜಿಲ್ಲೆಯ ಜಿಲ್ಲಾಧ್ಯಕ್ಷರು ಸಂಘದ ಎಲ್ಲಾ ಪದಾಧಿಕಾರಿಗಳು ನೂರಾರು ಪರವಾನಗಿ ಭೂ ಮಾಪಕರು ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.