
ಮಧುಗಿರಿ, ನ. ೨- ಆಗ್ನೇಯ ಪದವೀಧರರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕೆ.ಎಂ ಸುರೇಶ್ ರವರನ್ನು ಪ್ರಜ್ಞಾವಂತ ಮತದಾರರು ೨೩ ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದು, ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಮುಕುಟಪ್ರಾಯವಾಗಿದೆ ಎಂದು ನಿಕಟ ಪೂರ್ವ ರಾಜ್ಯ ಪರಿಷತ್ ಸದಸ್ಯ ಡಿ.ಪಿ ಸುಬ್ಬರಾಮಯ್ಯ ಹೇಳಿದರು.
ಆಗ್ನೇಯ ಪದವೀಧರರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕೆ.ಎಂ ಸುರೇಶ್ ಜಯಗಳಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೈತ್ರಿ ಅಭ್ಯರ್ಥಿಯ ಉಸ್ತುವಾರಿಯಾಗಿ ಮಧುಗಿರಿಗೆ ನಿಯೋಜನೆಗೊಂಡಿದ್ದು, ಪದವೀಧರರ ಮತಗಳನ್ನು ನೊಂದಣಿ ಮಾಡಿಸುವ ಮೂಲಕ ಎಲ್ಲ ಪದವೀಧರರನ್ನು ಸಂಪರ್ಕಿಸಲಾಗಿದೆ. ಮೋದಿಯವರ ಆದರ್ಶ, ದೇವೇಗೌಡರ ಶ್ರಮ ದೇಶದ ಒಳಿತೆಗೆ ಅವರ ಸೇವೆ ಪರಿಗಣಿಸಿ ಪ್ರಜ್ಞಾವಂತ ಪದವೀಧರರು ಮೈತ್ರಿ ಅಭ್ಯರ್ಥಿಗೆ ಮತ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಗೆಲುವು ಎಂದರು.
ಈಗ ಯಾರೂ ಸಹ ಅಭ್ಯರ್ಥಿ ನೋಡಿ ಮತ ಹಾಕುವುದಿಲ್ಲ. ಮತದಾರರು ಪ್ರಬುದ್ದರಾಗಿದ್ದು, ಈ ಗೆಲುವಿಗೆ ಜೆಡಿಎಸ್ ನವರೂ ಸಹ ಶ್ರಮ ಹಾಕಿದ್ದಾರೆ. ಬಿಜೆಪಿಯ ಮುಖಂಡರೂ ಸಹ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಾನೂ ಸಹ ಸ್ಥಳೀಯನಾಗಿದ್ದು, ನೆಲಮಂಗಲದಲ್ಲಿ ವ್ಯವಸಾಯಗಾರ ಕುಟುಂಬದವನಾಗಿದ್ದೇನೆ. ಮುಂದಿನ ಗ್ರಾ.ಪಂ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ೧೫೦ ಕ್ಕೂ ಹೆಚ್ಚು ಗ್ರಾ.ಪಂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ ಆನಂತರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್?ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿದ್ದೇನೆ. ನಮ್ಮ ಮೈತ್ರಿ ಮುಂದಿನ ದಿನಗಳಲ್ಲೂ ಮುಂದುವರಿಯಲಿದ್ದು, ಹೈಕಮಾಂಡ್ ನಿರ್ದೇಶನದಂತೆ ಕೆಲಸ ಮಾಡುತ್ತೇನೆ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ಎಂ. ಸುರೇಶ್ ರವರು ಸರಳ ಸಜ್ಜನ ವ್ಯಕ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ೨೩ ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದು, ಮುಂದಿನ ದಿನಗಳಲ್ಲೂ ಸ್ಥಳೀಯವಾಗಿ ಮೈತ್ರಿ ಮಾಡಿಕೊಂಡು ಹೋಗಲು ಹೈಕಮಾಂಡ್ ಸೂಚನೆ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಾಂಡುರಂಗಾರೆಡ್ಡಿ, ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ವೆಂಕಟಾಪುರ ಗೋವಿಂದರಾಜು, ರತ್ನಮ್ಮ, ಪದ್ಮಣ್ಣ, ಕೂರ್ಲಪ್ಪ, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.


























