
ಕೋಲಾರ,ಏ,೩- ತಾಲ್ಲೂಕಿನ ಗರುಡನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ೩೫೦ ವರ್ಷಗಳ ಪುರಾಣ ಪ್ರಸಿದ್ಧ ರುಕ್ಮಣಿ ಸತ್ಯಭಾಮ ಸಮೇತ ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಸೀತಾರಾಮ, ಲಕ್ಷ್ಮಣ, ಆಂಜನೇಯಸ್ವಾಮಿಯ ೧೯ನೇ ವರ್ಷದ ರಥೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗುವುದು ಎಂದು ಗರುಡನಹಳ್ಳಿಯ ವೇಣುಗೋಪಾಲಸ್ವಾಮಿ ಹಾಗೂ ಆಂಜನೇಯ ಸೇವಾ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಏ.೪ರ ಶನಿವಾರ ಬೆಳಿಗ್ಗೆ ೭ಗಂಟೆಗೆ ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ, ಪೂಜೆ ಕಾರ್ಯ ನಡೆಯಲಿದೆ, ೧೦.೩೦ಕ್ಕೆ ಅನ್ನ ಸಂತರ್ಪಣೆ, ೧೧.೩೦ಕ್ಕೆ ರಥೋತ್ಸವಕ್ಕೆ ಊರಿನ ಮುಖಂಡರು ಚಾಲನೆ ನೀಡಲಿದ್ದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ರಾತ್ರಿ ೭ಗಂಟೆಗೆ ಬಾಣ ಬಿರುಸುಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಗರುಡನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಶ್ರೀ ಆಂಜನೇಯ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಗರುಡನಹಳ್ಳಿ ಗ್ರಾಮಸ್ಥರು ಕೊರಿದ್ದಾರೆ.





















