Home ಕ್ರೈಂ ಸುದ್ದಿಗಳು ಮದುವೆ ಆಹ್ವಾನ ಪತ್ರಿಕೆ ಹಂಚಲು ತೆರಳಿದ್ದ ಇಬ್ಬರ ದುರ್ಮರಣ

ಮದುವೆ ಆಹ್ವಾನ ಪತ್ರಿಕೆ ಹಂಚಲು ತೆರಳಿದ್ದ ಇಬ್ಬರ ದುರ್ಮರಣ

ಸೈದಾಪುರ: ಮೇ.11:ಕಡೇಚೂರು ಗ್ರಾಮದ ಹೊರಭಾಗದಲ್ಲಿ 150ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮದುವೆ ಆಹ್ವಾನ ಪತ್ರಿಕೆ ಹಂಚಲು ತೆರಳಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ಗೌಡಗೇರಾ ಗ್ರಾಮದ ಶಿವರಾಜ್ (60) ಹಾಗೂ ಬಸವಲಿಂಗ (28) ಎಂದು ಗುರುತಿಸಲಾಗಿದೆ. ಇವರು ತಮ್ಮ ಸಂಬಂಧಿಕರ ಮದುವೆ ನಿಮಿತ್ತ ಆಹ್ವಾನ ಪತ್ರಿಕೆಗಳನ್ನು ಹಂಚಲು ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ, ಕಡೇಚೂರು ಗ್ರಾಮದ ಹೊರವಲಯದಲ್ಲಿ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್‍ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಡಿಕ್ಕಿಯ ತೀವ್ರತೆಗೆ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಟ್ರಾಕ್ಟರ್ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸೈದಾಪುರ ಪೆÇಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ದುರ್ಘಟನೆಯಿಂದ ಗೌಡಗೇರಾ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮದುವೆ ಸಂಭ್ರಮ ಮನೆಮಾಡಬೇಕಿದ್ದ ಕುಟುಂಬದಲ್ಲಿ ದುಃಖ ಆವರಿಸಿದೆ. ಸ್ಥಳೀಯರು ಅಕ್ರಮ ಮರಳು ಸಾಗಾಟ ಹಾಗೂ ಅಜಾಗರೂಕ ವಾಹನ ಚಾಲನೆಯೇ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೈದಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಟ್ರಾಕ್ಟರ್ ಚಾಲಕನ ಪತ್ತೆಗೆ ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.