Home Lead News ಗುಂಡಿನ ದಾಳಿ ಟ್ರಂಪ್ ಪಾರು

ಗುಂಡಿನ ದಾಳಿ ಟ್ರಂಪ್ ಪಾರು

ವಾಷಿಂಗ್ಟನ್, ಏ. ೨೬- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದ ಔತಣಕೂಟದ ಕಾರ್ಯಕ್ರಮದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದ್ದು, ಅಧ್ಯಕ್ಷ ಟ್ರಂಪ್ ಸೇರಿದಂತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಗಣ್ಯರು ಸುರಕ್ಷಿತವಾಗಿದ್ದಾರೆ. ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.


ವಾಷಿಂಗ್ಟನ್ ಹಿಲ್ಟನ್‌ನ ಹೋಟೆಲ್‌ನಲ್ಲಿ ನಿನ್ನೆ ಶ್ವೇತ ಭವನದ ವರದಿಗಾರರಿಗೆ ಔತಣಕೂಟವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಪರ ಪತ್ನಿ ಮೆಲನಿಯಾ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಹಲವು ಗಣ್ಯರು, ಹೆಸರಾಂತ ಪತ್ರಕರ್ತರು ಭಾಗಿಯಾಗಿದ್ದರು.
ಹೋಟೆಲ್‌ನ ಹೊರಗೆ ೪-೫ ಬಾರಿ ಗುಂಡು ಹಾರಿಸಿದ ಶಬ್ದ ಕೇಳಿ ಬಂದಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಸಿಕ್ರೆಟ್ ಸರ್ವೀಸ್ ಏಜೆಂಟ್‌ಗಳು ಮತ್ತು ಟ್ರಂಪ್ ಅವರ ಭದ್ರತಾ ಸಿಬ್ಬಂದಿ ಟ್ರಂಪ್ ಮತ್ತು ಅವರ ಕುಟುಂಬ ಹಾಗೂ ಉಪಾಧ್ಯಕ್ಷ ಜೆ.ಡಿ. ವ್ಯಾನ್ ಮತ್ತು ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ಯಾವುದೇ ಅನಾಹುತವಾಗದಂತೆ ನೋಡಿಕೊಂಡರು.


ಇದೇ ವೇಳೆ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೋ, ರಕ್ಷಣಾ ಕಾರ್ಯದರ್ಶಿ ಪೀಟ್ ಎಗೆಟ್ ರವರನ್ನು ಸುರಕ್ಷಿತವಾಗಿ ಕರೆದೊಯ್ಯಲಾಯಿತು.
ಗುಂಡಿನ ಶಬ್ದ ಕೇಳುತ್ತಿದ್ದಂತೆ ಔತಣಕೂಟದಲ್ಲಿ ಭಾಗಿಯಾಗಿದ್ದ ಪತ್ರಕರ್ತರು ಮತ್ತು ಗಣ್ಯರು ಭಯಭೀತರಾಗಿ ಟೇಬಲ್ ಕೆಳಗೆ ಅವಿತುಕೊಂಡರು. ಕೂಡಲೇ ಭದ್ರತಾ ಪಡೆಗಳು ಮತ್ತು ನ್ಯಾಷನಲ್ ಗಾರ್ಡ್ ಹೋಟೆಲ್‌ನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಯಾವುದೇ ಹೆಚ್ಚಿನ ಅನಾಹುತಗಳನ್ನು ತಡೆದರು.
ವಾಷಿಂಗ್ಟನ್ ಹಿಲ್ಟನ್ ಹೋಟೆಲ್ ಸ್ಥಳದಲ್ಲಿ ಜೋರಾಗಿ ಗುಂಡಿನ ಶಬ್ದ ಕೇಳಿ ಬಂದಿದೆ. ವೈಟ್‌ಹೌಸ್ ವರದಿಗಾರರ ಔತಣಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಮೇಜಿನ ಕೆಳಗೆ ಅಡಗಿ ಕುಳಿತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.


ಪೊಲೀಸರು ಹೋಟೆಲ್‌ನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದು, ಹೆಚ್ಚಿನ ಸುರಕ್ಷತೆಗೆ ಹೆಲಿಕಾಪ್ಟರ್‌ನ್ನು ರವಾನಿಸಲಾಯಿತು.
ಡೊನಾಲ್ಡ್ ಟ್ರಂಪ್ ರವರಿಗೆ ಯಾವುದೇ ಗಾಯವಾಗಿಲ್ಲ ಎಂದು ಸಿಎನ್‌ಎನ್ ಹಾಗೂ ಅಮೆರಿಕದ ಇತರೆ ಮಾಧ್ಯಮಗಳು ವರದಿ ಮಾಡಿವೆ.
ಮತ್ತೊಂದು ವರದಿಯ ಪ್ರಕಾರ ಗುಂಡು ಹಾರಿಸಿದ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿರುವ ಬಗ್ಗೆಯೂ ವರದಿಯಾಗಿದೆ. ಈ ಕುರಿತು ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.


ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣದ ನಂತರ ಟ್ರಂಪ್ ಮಾತನಾಡಲು ಮುಂದಾದ ಸಂದರ್ಭದಲ್ಲೇ ಗುಂಡಿನ ಶಬ್ದ ಕೇಳಿ ಬಂದಿದೆ ಎನ್ನಲಾಗಿದೆ.


ಶಂಕಿತ ವ್ಯಕ್ತಿಯ ಬಂಧನ


ಶಂಕಿತ ಶೂಟರ್‌ನನ್ನು ಪೊಲೀಸರು ಬಂಧಿಸಿದ್ದು, ಈತ ಕ್ಯಾಲಿಫೋರ್ನಿಯಾದವನಾಗಿದ್ದು, ೩೦ ವರ್ಷ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆದಿದೆ.
ಹೋಟೆಲ್‌ನ ವಾಲ್ ರೂಮ್‌ನಲ್ಲಿ ಅತಿಥಿಗಳು ಕುಳಿತಿದ್ದಾಗ ನಿನ್ನೆ ರಾತ್ರಿ ೯ರ ಸುಮಾರಿಗೆ ಹೋಟೆಲ್ ಹೊರ ಭಾಗದಲ್ಲಿ ೪ ರಿಂದ ೮ ಬಾರಿ ಗುಂಡು ಹಾರಿಸಿದ ಶಬ್ದ ಕೇಳಿಸಿದೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.


ಔತಣಕೂಟದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದ ಒಂದು ಗಂಟೆಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಥ್ರೂತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ನಾನು ಸುರಕ್ಷಿತವಾಗಿದ್ದೇನೆ. ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ತ್ವರಿತವಾಗಿ ದಾಳಿಕೋರರನ್ನು ಬಂಧಿಸಿದ ಭದ್ರತಾ ಪಡೆಯ ಕಾರ್ಯವನ್ನು ಶ್ಲಾಘಿಸುತ್ತೇನೆ ಎಂದು ಟ್ರಂಪ್ ತಿಳಿಸಿದ್ದಾರೆ.


ಶ್ವೇತ ಭವನದ ವರದಿಗಾರರ ಔತಣಕೂಟದ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಔತಣಕೂಟ ರದ್ದಾಗಿದ್ದು, ಹೊಸ ದಿನಾಂಕ ನಿಗದಿ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.


ಯುದ್ಧಕ್ಕೂ ಗುಂಡಿನ ದಾಳಿಗೂ ಸಂಬಂಧ ಗೊತ್ತಿಲ್ಲ


ಗುಂಡಿನ ದಾಳಿಗೂ ಇರಾನ್ ಯುದ್ಧಕ್ಕೂ ಸಂಬಂಧ ಇದೆಯೇ ಎಂಬುದು ನನಗೆ ತಿಳಿದಿಲ್ಲ. ಪ್ರಾಥಮಿಕ ಮಾಹಿತಿ ಆಧಾರದಲ್ಲಿ ಅಂತಹ ಸಾಧ್ಯತೆ ಕಡಿಮೆ ಎಂದು ಟ್ರಂಪ್ ಹೇಳಿದ್ದಾರೆ.


ಈ ದಾಳಿಯ ಮೂಲಕ ನಮ್ಮನ್ನು ಎದೆಗುಂದಿಸಲು ಸಾಧ್ಯವಿಲ್ಲ. ಇರಾನ್ ಯುದ್ಧದಿಂದ ಹಿಂಜರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಂದೂಕುಧಾರಿ ಶಸ್ತ್ರಾಸ್ತ್ರ ಹೊಂದಿದ್ದ ದಾಳಿಕೋರನ ಹಿಂದಿನ ಉದ್ದೇಶದ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.


ಹಿಂಸಾಚಾರಕ್ಕೆ ಸ್ಥಾನವಿಲ್ಲ: ಮೋದಿ


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದ ಔತಣಕೂಟದಲ್ಲಿ ಗುಂಡಿನ ದಾಳಿ ನಡೆದಿರುವುದನ್ನು ಖಂಡಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ ಎಂದಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು ವಾಷಿಂಗ್ಟನ್ ಡಿಸಿ ಹೋಟೆಲ್‌ನಲ್ಲಿ ನಡೆದ ಭದ್ರತಾ ಲೋಪದ ಘಟನೆಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ನಿರಾಳವಾಗಿದ್ದೇನೆ. ಅವರ ಸುರಕ್ಷತೆ ಹಾಗೂ ಯೋಗಕ್ಷೇಮಕ್ಕಾಗಿ ನಾನು ಹಾರೈಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ. ಮತ್ತು ಅದನ್ನು ಸ್ಪಷ್ಟವಾಗಿ ಖಂಡಿಸಬೇಕು ಎಂದು ಮೋದಿ ಹೇಳಿದ್ದಾರೆ.


ಶಂಕಿತ ದಾಳಿಕೋರರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಟ್ರಂಪ್ ಅವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತೇ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದು ಬರಲಿದೆ ಎಂದು ಅವರು ಹೇಳಿದ್ದಾರೆ.