Home ಜಿಲ್ಲೆ ಕಲಬುರಗಿ ಸಂಸ್ಕಾರದಲ್ಲಿದೆ ಸಿರಿವಂತಿಕೆಯ ಶೋಭೆ: ಚನ್ನಮಲ್ಲ ಸ್ವಾಮೀಜಿ

ಸಂಸ್ಕಾರದಲ್ಲಿದೆ ಸಿರಿವಂತಿಕೆಯ ಶೋಭೆ: ಚನ್ನಮಲ್ಲ ಸ್ವಾಮೀಜಿ

ಕಲಬುರಗಿ ಅ 16:ಆಧುನಿಕ ಯುಗದಲ್ಲಿ ಮನುಷ್ಯನು ಭೌತಿಕವಾಗಿ ಹಾಗೂ ತಾಂತ್ರಿಕವಾಗಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಆತನ ಆಂತರಿಕ ನೆಮ್ಮದಿ ಮತ್ತು ನೈತಿಕ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿವೆ. ದೊಡ್ಡ ಮನೆಗಳನ್ನು ಕಟ್ಟುತ್ತಿರುವ ಮನುಷ್ಯನ ಮನಸ್ಸುಗಳು ಮಾತ್ರ ಸಣ್ಣದಾಗುತ್ತಿವೆ” ಎಂದು ನರೋಣಾ, ಗೋಳಾ ಹೊಸಮಠ ದ ಪೂಜ್ಯ ಚನ್ನಮಲ್ಲ ಸ್ವಾಮಿಗಳು ತಮ್ಮ ಪ್ರವಚನದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು.
ದಸರಾ – ನವರಾತ್ರಿ ಹಬ್ಬದ ಅಂಗವಾಗಿ ನಗರದ ಅಡ್ವೊಕೇಟ್ಸ್ ಕಾಲೋನಿಯಲ್ಲಿರುವ ನೂತನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿರುವ ವರದಾನಿ ಗುಡ್ಡಾಪುರದ ದಾನಮ್ಮ ದೇವಿಯ ಜೀವನ ದರ್ಶನ ಕುರಿತ ಪುರಾಣ ಪ್ರವಚನ ನೀಡುತ್ತ ಮಾತನಾಡಿದ ಅವರು,ಇಂದು ವಿದ್ಯೆ ಬಂತು ಆದರೆ ವಿನಯ ಹೋಯಿತು, ಬುದ್ಧಿ ಬಂತು ಆದರೆ ಶ್ರದ್ಧೆ ಹೋಯಿತು. ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದ ಸಾಧನೆಯಿಂದಾಗಿ ಮನುಷ್ಯ ದೀರ್ಘಾಯುಷ್ಯವನ್ನು ಪಡೆದಿದ್ದಾನಾದರೂ, ಜೀವನದ ಸ್ವಾರಸ್ಯ ಹಾಗೂ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡಿದ್ದಾನೆ. ನಮಗೆಲ್ಲರಿಗೂ ಸ್ವಾತಂತ್ರ್ಯ ದೊರಕಿದೆ, ಆದರೆ ಪರಸ್ಪರ ಗೌರವಿಸುವ ಸೌಜನ್ಯ ಶೂನ್ಯವಾಗಿದೆ. ವೇದಿಕೆಗಳ ಮೇಲೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ, ಆದರೆ ಆ ಮಾತುಗಳನ್ನು ಕೃತಿಯಲ್ಲಿ ಇಳಿಸುವವರ ಕೊರತೆ ಎದ್ದುಕಾಣುತ್ತಿದೆ ಎಂದು ವಿಷಾದಿಸಿದರು.
ಮನೆಯಲ್ಲಿನ ಸಣ್ಣಪುಟ್ಟ ಕೆಲಸಗಳಿಗೂ ಇಂದು ಯಂತ್ರಗಳನ್ನು ಅವಲಂಬಿಸಿರುವುದರಿಂದ ದೈಹಿಕ ಶ್ರಮ ಸಂಪೂರ್ಣವಾಗಿ ಕಡಿಮೆಯಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಮಾಡುತ್ತಿದ್ದ ದೈಹಿಕ ಶ್ರಮ ಕೇವಲ ಕೆಲಸವಾಗಿರದೆ ಅವರ ಆರೋಗ್ಯದ ಗುಟ್ಟಾಗಿತ್ತು. ಆದರೆ ಇಂದು ಟಿವಿ, ಮೊಬೈಲ್, ಕಾರು ಸೇರಿದಂತೆ ಸಕಲ ಭೌತಿಕ ಸೌಲಭ್ಯಗಳಿದ್ದರೂ ಮನುಷ್ಯನಿಗೆ ಆಂತರಿಕ ಸಮಾಧಾನವಿಲ್ಲ. ನೈಜವಾದ ನೆಮ್ಮದಿ ಹಣದಿಂದಲೋ ಅಥವಾ ವಸ್ತುಗಳಿಂದಲೋ ಸಿಗುವುದಿಲ್ಲ; ಬದಲಾಗಿ, ಅದು ಸತ್ಸಂಗ ಮತ್ತು ಹಿರಿಯರ ಸಾನಿಧ್ಯದಲ್ಲಿ ಮಾತ್ರ ಲಭ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಮಕ್ಕಳ ಪಾಲನೆಯ ಕುರಿತು ಪೆÇೀಷಕರಿಗೆ ಎಚ್ಚರಿಕೆ ನೀಡಿದ ಪೂಜ್ಯರು, ಮಕ್ಕಳಿಗೆ ಐದು ವರ್ಷಗಳ ಕಾಲ ಅತ್ಯಂತ ಪ್ರೀತಿಯಿಂದ ಲಾಲನೆ ಮಾಡಬೇಕು, ಮುಂದಿನ ಹತ್ತು ವರ್ಷಗಳ ಕಾಲ ಶಿಸ್ತಿನಿಂದ ಬೆಳೆಸಬೇಕು ಹಾಗೂ ಹದಿನಾರು ವರ್ಷ ತುಂಬಿದ ನಂತರ ಅವರೊಡನೆ ಮಿತ್ರರಂತೆ ವರ್ತಿಸಬೇಕು. ಕೇವಲ ಅಂಕಗಳನ್ನು ಗಳಿಸುವ ಶಿಕ್ಷಣ ನೀಡಿದರೆ ಸಾಲದು, ಅದರೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು ಎಂದರು.ಮುಗುಳನಾಗಾವಿ ಕಟ್ಟಿಮನಿ ಸಂಸ್ಥಾನ ಹೀರೆಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.