Home ಮುಖಪುಟ ಸುದ್ದಿ ಕ್ಷೇತ್ರ ಮರುವಿಂಗಡಣೆ ಕುರಿತು ಸರ್ವಪಕ್ಷ ಸಭೆಗೆ ಖರ್ಗೆ ಒತ್ತಾಯ

ಕ್ಷೇತ್ರ ಮರುವಿಂಗಡಣೆ ಕುರಿತು ಸರ್ವಪಕ್ಷ ಸಭೆಗೆ ಖರ್ಗೆ ಒತ್ತಾಯ

ಪ್ರಧಾನಿ ಮೋದಿಗೆ ನಾಲ್ಕನೇ ಬಾರಿ ಪತ್ರ; ಮಸೂದೆ ಮಂಡಿಸುವ ಮುನ್ನ ಸಮಾಲೋಚನೆಗೆ ಆಗ್ರಹ

ನವದೆಹಲಿ.ಅ೧೬: ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆಗಳ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ಈ ಮೂಲಕ ಅವರು ನಾಲ್ಕನೇ ಬಾರಿ ಸರ್ವಪಕ್ಷ ಸಭೆಗೆ ಒತ್ತಾಯಿಸಿದ್ದಾರೆ.

ಕ್ಷೇತ್ರ ಮರುವಿಂಗಡಣೆಯಂತಹ ಮಹತ್ವದ ಪ್ರಸ್ತಾವನೆಗಳನ್ನು ಅಂತಿಮಗೊಳಿಸಿ ಸಂಸತ್ತಿನಲ್ಲಿ ಮಂಡಿಸುವ ಮೊದಲು ಎಲ್ಲ ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಆಲಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ. ಸಂವಿಧಾನಕ್ಕೆ ವ್ಯಾಪಕ ಪರಿಣಾಮ ಬೀರುವ ತಿದ್ದುಪಡಿಗಳನ್ನು ಏಕಪಕ್ಷೀಯವಾಗಿ ಮುಂದುವರಿಸುವುದು ಸೂಕ್ತವಲ್ಲ ಎಂದು ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.

ಮುಂಗಾರು ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಬಳಿಕವೂ ಸಂಸತ್ತಿನ ಉಭಯ ಸದನಗಳ ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಖರ್ಗೆ ಗಮನ ಸೆಳೆದಿದ್ದಾರೆ.

೨೦೨೬ರ ಆಗಸ್ಟ್ ೧೩ರಂದು ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದರೆ, ಅಕ್ಟೋಬರ್ ೧೬ರ ವೇಳೆಗೆ ೬೪ ದಿನಗಳು ಕಳೆದಿದ್ದರೂ ಲೋಕಸಭೆ ಮತ್ತು ರಾಜ್ಯಸಭೆಯ ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸುವ ಆದೇಶ ಹೊರಬಿದ್ದಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪರಿಸ್ಥಿತಿ ಅಸಾಮಾನ್ಯವಾಗಿದ್ದು, ಸಂಸತ್ತನ್ನು ದಿಢೀರ್ ಮರುಕೂಡಿಸುವ ಅಥವಾ ಅಧಿವೇಶನವನ್ನು ವಿಸ್ತರಿಸುವ ಸಾಧ್ಯತೆಗಳ ಕುರಿತು ಊಹಾಪೋಹಗಳಿಗೆ ಕಾರಣವಾಗಿದೆ ಎಂದು ಖರ್ಗೆ ಹೇಳಿದ್ದಾರೆ.

ಸಂಸತ್ತಿನ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವುದು ಮತ್ತು ರಾಷ್ಟ್ರಪತಿಗಳ ಆದೇಶದ ಮೂಲಕ ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸುವುದು ಎರಡು ವಿಭಿನ್ನ ಪ್ರಕ್ರಿಯೆಗಳಾಗಿವೆ.ಕಳೆದ ಏಪ್ರಿಲ್‌ನಲ್ಲಿ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಸರ್ಕಾರ ಪ್ರಯತ್ನಿಸಿತ್ತು. ಆದರೆ, ಏಪ್ರಿಲ್ ೧೭ರಂದು ಲೋಕಸಭೆಯಲ್ಲಿ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಪಡೆಯಲು ಮಸೂದೆ ವಿಫಲವಾಗಿತ್ತು ಎಂದು ಖರ್ಗೆ ನೆನಪಿಸಿದ್ದಾರೆ.

ಮಸೂದೆ ಮಂಡನೆಗೂ ಮುನ್ನ ಸರ್ವಪಕ್ಷ ಸಭೆ ಕರೆಯುವಂತೆ ಏಪ್ರಿಲ್ ೧೧ರಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೆ. ಆದರೂ, ಸರ್ಕಾರ ಏಪ್ರಿಲ್ ೧೪ರಂದು ಮಸೂದೆಗಳನ್ನು ಸಾರ್ವಜನಿಕಗೊಳಿಸಿ, ಏಪ್ರಿಲ್ ೧೬ರಂದು ವಿಶೇಷ ಸಂಸತ್ ಅಧಿವೇಶನ ಕರೆದಿತ್ತು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ನಂತರ ಜುಲೈ ೧೬ ಮತ್ತು ಆಗಸ್ಟ್ ೨೭ರಂದು ಇದೇ ಬೇಡಿಕೆಯನ್ನು ಮುಂದಿಟ್ಟು ಪತ್ರ ಬರೆದಿದ್ದ ಖರ್ಗೆ, ಇದೀಗ ನಾಲ್ಕನೇ ಬಾರಿಗೆ ತಮ್ಮ ಒತ್ತಾಯವನ್ನು ಪುನರುಚ್ಚರಿಸಿದ್ದಾರೆ.

ಕ್ಷೇತ್ರ ಮರುವಿಂಗಡಣೆಯು ಸಂಸತ್ತಿನ ಪ್ರಾತಿನಿಧ್ಯ ಮತ್ತು ರಾಜಕೀಯ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಪ್ರಸ್ತಾವನೆಗಳನ್ನು ಪರಿಶೀಲಿಸಲು ರಾಜಕೀಯ ಪಕ್ಷಗಳು ಹಾಗೂ ಸಂಬಂಧಿತ ಎಲ್ಲ ಪಾಲುದಾರರಿಗೆ ಸಾಕಷ್ಟು ಕಾಲಾವಕಾಶ ನೀಡಬೇಕು ಎಂದು ಖರ್ಗೆ ಹೇಳಿದ್ದಾರೆ.

ಸರ್ವಪಕ್ಷ ಸಭೆಯ ಮೂಲಕ ಒಮ್ಮತ ಮೂಡಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಧಾನಿ ಅವರನ್ನು ಒತ್ತಾಯಿಸಿದ್ದಾರೆ. ಹಿಂದಿನಂತೆ ವ್ಯಾಪಕ ಪರಿಣಾಮ ಬೀರುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಬಲವಂತವಾಗಿ ಅಂಗೀಕರಿಸಲು ಪ್ರಯತ್ನಿಸಬಾರದು ಎಂದೂ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಕ್ಷೇತ್ರ ಮರುವಿಂಗಡಣೆ ಕುರಿತು ಸರ್ಕಾರದ ಮುಂದಿನ ನಡೆ ಮತ್ತು ಪ್ರತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸುವ ಬಗ್ಗೆ ಕೇಂದ್ರದ ಪ್ರತಿಕ್ರಿಯೆ ಈಗ ಕುತೂಹಲ ಮೂಡಿಸಿದೆ.