
ಯಾದಗಿರಿ,ಜು.೭:ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಸಂಭವಿಸಿದೆ. ಘಟನೆಯಲ್ಲಿ ೬ ಜನರ ಸ್ಥಿತಿ ಗಂಭೀರವಾಗಿದೆ.
ಮೃತರನ್ನು ದೇವಿಕೆಮ್ಮಹೊಟ್ಟಿ (೪೮), ವೆಂಕಮ್ಮ (೬೦), ರಾಮಣ್ಣ ಪೂಜಾರಿ (೫೦) ಎಂದು ಗುರುತಿಸಲಾಗಿದೆ. ೧೦ ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ತಿಪ್ಪನಟಗಿ ಗ್ರಾಮಸ್ಥರು ವಾಂತಿ-ಭೇದಿಯಿಂದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮೂವರು ಸಾವನ್ನಪ್ಪಿದ್ದಾರೆ.
೭ ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇನ್ನೂ ೨೦ ಮಂದಿ ಅಸ್ವಸ್ಥರಾಗಿದ್ದಾರೆ.
ತಿಪ್ಪನಟಗಿ ಗ್ರಾಮಕ್ಕೆ ಸುರಪುರ ತಾಲ್ಲೂಕು ಅಧಿಕಾರಿ ರಾಜವೆಂಕಟಪ್ಪ ಭೇಟಿನೀಡಿ ಪರಿಶೀಲನೆ ನಡೆಸಿದರು. ವಾಂತಿ-ಭೇದಿ ಪ್ರಕರಣ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಬಿರಾದಾರ ಸೂಚಿಸಿದ್ದಾರೆ.