
ಕಲಬುರಗಿ,ಏ.27-ಮನೆಯ ಪತ್ರಾಸ್ ಶೆಡ್ ಹತ್ತಿರ ಕಟ್ಟಿದ್ದ ಮೂರು ಆಕಳು ಕಳವಾಗಿರುವ ಘಟನೆ ಬೇಲೂರ (ಜೆ) ಹತ್ತಿರ ನಡೆದಿದೆ.
ಹುಸೇನ್ ಭಾಷಾ ಮೈಹಿಬೂಬಸಾಬ್ ಅತ್ತಾರ ಎಂಬುವವರ 90 ಸಾವಿರ ರೂ.ಮೌಲ್ಯದ 3 ಆಕಳು ಕಳವಾಗಿದ್ದು, ಅವರು ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಹುಸೇನ್ ಭಾಷಾ ಅವರು ಇಟ್ಟಂಗಿ ಬಟ್ಟಿಯಲ್ಲಿ ಕೂಲಿ ಕೆಲಸ ಮಾಡುತ್ತ ಜೊತೆಗೆ ಹೈನುಗಾರಿಕೆಗಾಗಿ 3 ಆಕಳು ಸಾಕಿದ್ದರು. ನಿತ್ಯ ಆಕಳುಗಳನ್ನು ಮನೆಯ ಹೊರಗಡೆ ಕಟ್ಟುತ್ತಿದ್ದರು. ಏ.24 ರಂದು ರಾತ್ರಿ ಮಳೆಗಾಳಿ ಬರುತ್ತಿದ್ದುದ್ದರಿಂದ ಮನೆಯ ಪಕ್ಕದಲ್ಲಿರುವ ಪತ್ರಾಸ್ ಶೆಡ್‍ನಲ್ಲಿ ಆಕಳುಗಳನ್ನು ಕಟ್ಟಿದ್ದರು. ರಾತ್ರಿ ವೇಳೆ ಕಳ್ಳರು ಮೂರು ಆಕಳುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.






















