
ಮಧುಗಿರಿ, ನ. ೨- ತಾಲ್ಲೂಕಿನ ಪುರವರ ಹೋಬಳಿ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ಮಿತಿ ಮೀರಿದೆ ಎಂಬ ಆತಂಕ ಈಗ ಗ್ರಾಮಸ್ಥರನ್ನು ಕಾಡುತ್ತಿದ್ದು, ಒಂದೇ ರಾತ್ರಿ ಅರಳಪುರ ಗೇಟ್, ಪುರವರ ಹಾಗೂ ಬ್ಯಾಲ್ಯ ಗ್ರಾಮಗಳಲ್ಲಿ ಸರಣಿ ಕಳ್ಳತನ ನಡೆಸಿರುವ ಖದೀಮರು, ಅಂಗಡಿಗಳ ಬೀಗ ಮುರಿದು ನಗದು, ಸಿಗರೇಟ್, ಗುಟ್ಕಾ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದು, ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಹೆದ್ದಾರಿ ಪಕ್ಕದಲ್ಲೇ ಕಳ್ಳರ ಕೈಚಳಕ!
ಮಧುಗಿರಿ-ಕೊಡಿಗೇನಹಳ್ಳಿ ರಾಜ್ಯ ಹೆದ್ದಾರಿಯ ಅರಳಪುರ ಗೇಟ್ ಬಳಿ ರಂಗನಾಥ್ ಅವರಿಗೆ ಸೇರಿದ ಚಿಲ್ಲರೆ ಅಂಗಡಿಯ ಬೀಗ ಮುರಿದಿರುವ ಕಳ್ಳರು, ಸುಮಾರು ೩ ಸಾವಿರ ರೂ. ನಗದು ಹಾಗೂ ೧೦ ಸಾವಿರ ರೂ. ಮೌಲ್ಯದ ಸಿಗರೇಟ್ ಮತ್ತು ಗುಟ್ಕಾ ದೋಚಿದ್ದಾರೆ. ಜನ ಸಂಚಾರವಿರುವ ಹೆದ್ದಾರಿ ಪಕ್ಕದಲ್ಲೇ ಕಳ್ಳರು ಕೈಚಳಕ ತೋರಿರುವುದು ವ್ಯಾಪಾರಿಗಳಲ್ಲಿ ಆತಂಕ ಹೆಚ್ಚಿಸಿದೆ.
ಪುರವರದಲ್ಲಿ ಮನೆಗೆ ನುಗ್ಗಿ ಮದ್ಯದ ಪಾರ್ಟಿ
ಪುರವರ ಗ್ರಾಮದಲ್ಲಿ ಖಾಲಿ ಮನೆಯೊಂದರ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಮನೆಯಲ್ಲೇ ಮದ್ಯಪಾನ ಮಾಡಿ ಬಿಯರ್ ಬಾಟಲಿಗಳನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಬಳಿಕ ಮಾರುತಿ ಫ್ಯಾನ್ಸಿ ಸ್ಟೋರ್ ಹಾಗೂ ಎರಡು ದಿನಸಿ ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಮಾರುತಿ ಪ್ರಾವಿಷನ್ ಸ್ಟೋರ್ನಲ್ಲಿ ಸಿಗರೇಟ್, ಗುಟ್ಕಾ ಹಾಗೂ ನಗದು ಕಳವು ಮಾಡಿದ್ದಾರೆ. ಮೆಡಿಕಲ್ ಶಾಪ್ ಬೀಗ ಮುರಿಯಲೂ ಯತ್ನಿಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಬ್ಯಾಲ್ಯದಲ್ಲಿ ಐದು ಅಂಗಡಿಗಳಿಗೆ ಕನ್ನ; ಸಾವಿರಾರು ರೂಪಾಯಿ ಲೂಟಿ!
ಬ್ಯಾಲ್ಯ ಗ್ರಾಮದಲ್ಲಿ ಎರಡು ಮೆಡಿಕಲ್ ಶಾಪ್, ಎರಡು ಬೇಕರಿ ಹಾಗೂ ಒಂದು ದಿನಸಿ ಅಂಗಡಿಯನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ. ವಿನಾಯಕ ಮೆಡಿಕಲ್ನಲ್ಲಿ ೬ ಸಾವಿರ ರೂ. ನಗದು, ಮಾರುತಿ ಮೆಡಿಕಲ್ನಲ್ಲಿ ೫,೩೦೦ ರೂ. ನಗದು, ಚಾಮುಂಡೇಶ್ವರಿ ಬೇಕರಿಯಲ್ಲಿ ೫೦೦ ರೂ. ನಗದು ಹಾಗೂ ತಂಪು ಪಾನೀಯಗಳು, ಮಂಜುನಾಥ್ ಬೇಕರಿಯಲ್ಲಿ ೬ ಸಾವಿರ ರೂ. ನಗದು. ಮತ್ತೊಂದು ದಿನಸಿ ಅಂಗಡಿಯಲ್ಲಿ ೨ ಸಾವಿರ ರೂ. ನಗದು ದೋಚಿದ್ದು, ಮಾರುತಿ ಮೆಡಿಕಲ್ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಆರು ತಿಂಗಳಾದರೂ ಎಟಿಎಂ ಕಳ್ಳರ ಪತ್ತೆಯಿಲ್ಲ; ಈಗ ಸರಣಿ ಕಳ್ಳತನ
ಇನ್ನು ಆರು ತಿಂಗಳ ಹಿಂದೆ ಪುರವರ ಗ್ರಾಮದ ಬಸ್ ನಿಲ್ದಾಣದಲ್ಲಿದ್ದ ಇಂಡಿಯಾ ಒನ್ ಎಟಿಎಂ ಯಂತ್ರವನ್ನೇ ಕಳವು ಮಾಡಲು ಕಳ್ಳರು ಯತ್ನಿಸಿದ್ದರು. ಭಾರವಾದ ಯಂತ್ರವನ್ನು ಎತ್ತಿಕೊಂಡು ಹೋಗಲು ಸಾಧ್ಯವಾಗದೆ ಬಸ್ ನಿಲ್ದಾಣದಲ್ಲೇ ಬಿಟ್ಟು ಪರಾರಿಯಾಗಿದ್ದರು. ಆದರೆ ಆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಇದುವರೆಗೂ ಪತ್ತೆಯಾಗಿಲ್ಲ. ಹಳೆಯ ಪ್ರಕರಣಕ್ಕೆ ಇನ್ನೂ ಉತ್ತರ ಸಿಗದಿರುವಾಗಲೇ ಇದೀಗ ಮೂರು ಗ್ರಾಮಗಳಲ್ಲಿ ಸರಣಿ ಕಳ್ಳತನ ನಡೆದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಗ್ರಾಮೀಣ ಭಾಗದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದರೂ ಬೀಟ್ ಪೊಲೀಸ್ ವ್ಯವಸ್ಥೆ ಸಮರ್ಪಕವಾಗಿದೆಯೇ? ರಾತ್ರಿ ವೇಳೆ ಪೊಲೀಸ್ ಗಸ್ತು ನಡೆಯುತ್ತಿದೆಯೇ ಎಂಬ ಪ್ರಶ್ನೆಗಳು ಗ್ರಾಮಸ್ಥರಲ್ಲಿ ಮೂಡಿವೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಕಳ್ಳರನ್ನು ಪತ್ತೆಹಚ್ಚಿ ಗ್ರಾಮೀಣ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.


























