
ವಿಜಯಪುರ, ಏ. 9:ಸಚಿವ ಶಿವಾನಂದ ಪಾಟೀಲ್ ವಿರುದ್ಧ ಪ್ರಚಾರ ಮಾಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.
ಎಂ.ಬಿ. ಪಾಟೀಲ್ ಗೆ ಸ್ವಾಭಿಮಾನ ಇದ್ದರೆ ಸಚಿವ ಶಿವಾನಂದ ಪಾಟೀಲ್ ವಿರುದ್ದ ಪ್ರಚಾರ ಮಾಡಲಿ ಎಂದು ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಸಚಿವ ಎಂ ಬಿ ಪಾಟೀಲ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಸಚಿವ ಶಿವಾನಂದ ಪಾಟೀಲ್ ಹಾಗೂ ನಾನು ಒಂದೇ ಪಕ್ಷದಲ್ಲಿ ಇರುವವರು. ಬಬಲೇಶ್ವರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸಚಿವ ಶಿವಾನಂದ್ ಪಾಟೀಲ್ ನನ್ನ ವಿರುದ್ಧ ಪ್ರಚಾರ ಮಾಡಿರುವುದು ಕಂಡು ಬಂದಿಲ್ಲ ಎಂದರು.
ಚುನಾವಣೆಯಲ್ಲಿ ಶಿವಾನಂದ ಪಾಟೀಲ್ ಸಹೋದರ ವಿಜುಗೌಡ ಸ್ಪರ್ಧೆ ಮಾಡುತ್ತಾರೆ. ಶಿವಾನಂದ ಪಾಟೀಲ್ ಪರೋಕ್ಷವಾಗಿ ಸಹೋದರನ ಪ್ರಚಾರ ಮಾಡುತ್ತಾರೆ. ಹಾಗಾಗಿ ಎಂ.ಬಿ ಪಾಟೀಲ್ ಗೆ ಸ್ವಾಭಿಮಾನ ಇದ್ದರೆ ಶಿವಾನಂದ ಪಾಟೀಲ್ ವಿರುದ್ದ ಪ್ರಚಾರ ಮಾಡಲಿ ಎನ್ನುವ ಯತ್ನಾಳ ಹೇಳಿಕೆ ಸರಿಯಲ್ಲ. ಶಿವಾನಂದ ಪಾಟೀಲ್ ಕಾಂಗ್ರೆಸ್ ನಲ್ಲಿದ್ದಾರೆ. ಅದ್ಯಾವುದೂ ಇಲ್ಲ.
ನಾನೂ ಕಾಂಗ್ರೆಸ್ ನಲ್ಲಿದ್ದೇನೆ.
ಅವರು ಹಾಗೂ ನಾನು ಕಾಂಗ್ರೆಸ್ ಪಕ್ಷದ ಪ್ರಚಾರ ಮಾಡುತ್ತೇವೆ ಎಂದರು.
ಶಿವಾನಂದ ಪಾಟೀಲರ ತಮ್ಮ ಬಿಜೆಪಿಯಲ್ಲಿದ್ದಾರೆ. ಆದರೆ ಶಿವಾನಂದ ಪಾಟೀಲ್ ನನ್ನ ವಿರುದ್ದ ಚುನಾವಣೆಯಲ್ಲಿ ಪ್ರಚಾರ ಮಾಡಿರುವುದು ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು


















