
ಕಲಬುರಗಿ:ತಾ ಮಾಡುವ ಕೃಷಿಯ ತಾ ಮಾಡುವನ್ನವರ ಮಾಡಿ ಕೃಷಿ ತೀರಿದ ಬಳಿಕ ಮತ್ತೆ ಲಿಂಗಪೂಜೆ, ಗುರುದರ್ಶನ, ಜಂಗಮ ಪೂಜೆ ಎಂದು ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ ಅಂಕಿತದಲ್ಲಿ ಶರಣೆ ಅಕ್ಕಮ್ಮನ ಈ ವಚನ ಶೂನ್ಯ ಸಂಪಾದನೆಯ ಮಹತ್ವ ಹೇಳುತ್ತದೆ. ಅದರಂತೆ ಶಿವ ಮತ್ತು ಪಾರ್ವತಿಯರ ಮಧ್ಯೆ ಭೂ ಲೋಕ ಮತ್ತು ದೇವಲೋಕದ ಜನರ ಕುರಿತಾಗಿ ಅಪರೂಪದ ಸಂವಾದ ನಡೆಯುತ್ತದೆ.
ಚಾಮರಸನ ಪ್ರಭುಲಿಂಗಲೀಲೆಯ ಗತಿಗಳನ್ನು ಗತಿಯಾಗಿ ಹೇಳುವುದು ಬೇರೆ. ಅದನ್ನು ಆನುಭಾವಿಕ ಹಿನ್ನೆಲೆಯಿಂದ ಚಿಂತಿಸುವುದು ಬೇರೆ. ಅಂತಹ ಅಪರೂಪದ ಆನುಭಾವಿಕ ಚಿಂತನೆ ಇಲ್ಲಿ ನಡೆಯುತ್ತಿದೆ.
ಮನುಷ್ಯ ಈ ಸೃಷ್ಟಿಯಲ್ಲಿ ಆಗರ್ಭ ಶ್ರೀಮಂತನಾಗಿ ಬದುಕಬೇಕು. ಹಾಗೆಂದ ಮಾತ್ರಕ್ಕೆ ಭೌತಿಕ ಶ್ರೀಮಂತಿಕೆಯಿಂದ ಬದುಕುವುದಲ್ಲ. ಪ್ರಾಜ್ಞರು ಹೇಳುವಂತೆ ಹೃದಯ, ವಿಚಾರ ಹಾಗೂ ಬುದ್ಧಿವಂತಿಕೆಗಳಿಂದ ಶ್ರೀಮಂತನಾಗಿರಬೇಕು. ಹಣವುಳ್ಳವ ಹಣವಂತ. ಗುಣವುಳ್ಳವ ಗುಣವಂತ ಎನ್ನುವಂತೆ ಹಣ, ಗುಣ ಎರಡೂ ಉಳ್ಳವರೇ ನಿಜವಾದ ಶ್ರೀಮಂತರು.
ಪ್ರಭುಲಿಂಗಲೀಲೆ ಕೇಳುವವರು ಹೃದಯ, ವಿಚಾರ, ಬುದ್ಧಿವಂತಿಕೆಯ ಶ್ರೀಮಂತರಾಗಬೇಕು. ಇವುಗಳ ಸಿದ್ಧಿಯ ಸನ್ಮಾರ್ಗವೇ ಪ್ರಭುಲಿಂಗಲೀಲೆ. ವಿಚಾರ ಜ್ಞಾನದ ಹಿನ್ನೆಲೆಯಿಲ್ಲದ ಜೀವನ ಸಿದ್ಧಾಂತ ಆಗುವುದಿಲ್ಲ. ಇದು ರೆಡಿಮೇಡ್ ಫುಡ್ ಅಲ್ಲ. ಸ್ವಯಂ ಸಿದ್ಧ. ಬುದ್ಧಿವಂತಿಕೆ, ಹೃದಯವಂತಿಕೆಯಿಂದ ಅದನ್ನು ಸಾಧಿಸಬೇಕು.
ಅನ್ನ, ನೀರು, ವಸತಿ ಪಡೆಯುವಂತೆ ಜ್ಞಾನವನ್ನು ಸಂಪಾದನೆ ಮಾಡಬೇಕು. ಇದನ್ನು ಸಂಪಾದನೆ ಮಾಡಿ ಅನುಭಾವ ಶ್ರೀಮಂತರಾದವರು ಶರಣರು. ಅವರದು ಶೂನ್ಯ ಸಂಪಾದನೆ. ಅಂತಹ ಸಂಪತ್ತಿನ ಸಾರವೇ ಪ್ರಭುಲಿಂಗಲೇಲೆ.
-ಪೂಜ್ಯ ಮಹಾಂತ ಸ್ವಾಮೀಜಿ, ಮುದಗಲ್































