
ಭಾಲ್ಕಿ:ಎ.1:ಧರ್ಮದ ನಡೆ ಯಾವಾಗಲೂ ಪ್ರಗತಿಯ ಕಡೆ ಸಾಗುತ್ತದೆ.ಆ ದಿಶೆಯಲ್ಲಿ ಡೋಣಗಾಪುರದ ರಾಜೇಶ್ವರ ಶಿವಾರ್ಯರು ಹಮ್ಮಿಕೊಳ್ಳುವ ಧರ್ಮಾಧರಿತ ಕಾರ್ಯಗಳು ಅದಕ್ಕೆ ಪೂರಕವಾಗಿವೆ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಪ್ರತಿಪಾದಿಸಿದರು.
ತಾಲೂಕಿನ ಡೊಣಗಾಪುರ ಗ್ರಾಮದ ಶ್ರೀ ಡೋಣೇಶ್ವರ ದೇವಸ್ಥಾನದಲ್ಲಿ ನಡೆದ ಡೋಣೇಶ್ವರರ ಮಹಾಪೂಜಾ ಮಹೋತ್ಸವ ಮತ್ತು ವಿಶ್ವಶಾಂತಿಗಾಗಿ 44ನೇ ಜಪಯಜ್ಞ ಹಾಗೂ ಪ್ರಯೋಗಾತ್ಮಕ ಧರ್ಮಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಆಧುನಿಕ ಕಂಪ್ಯೂಟರ್ ಯುಗದಲ್ಲಿ ಧರ್ಮ ಎಂಬುದು ಜನರಿಂದ ಕಣ್ಮರೆಯಾಗುತ್ತಿರುವುದರಿಂದ ಸಮಾಜದಲ್ಲಿ ಪ್ರೀತಿ,ಪ್ರೇಮ,ವಿಶ್ವಾಸ,ಶೃದ್ಧೆ,ಶಾಂತಿ,ನೆಮ್ಮದಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಸಂಗತಿ ಖೇದಕರವಾಗಿದೆ.ಸನಾತನ ಧರ್ಮದಲ್ಲಿ ಪರಸ್ಪರ ತಿಳುವಳಿಕೆಯ ಮೂಲಕ ಸಂಯುಕ್ತ ಕಟುಂಬದ ಜನರು ಉತ್ಸಾಹ ಭರಿತ ಜೀವನ ಸಾಗಿಸುತ್ತಿದ್ದರು.ಇಂದು ನಾವು ಆರ್ಥಿಕವಾಗಿ ಸದೃಢರಾಗುತ್ತಿದ್ದೇವೆ.ಆದರೆ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವುದರಿಂದ ಯಾರಲ್ಲಿಯೂ ಸಮಾಧಾನ,ಶಾಂತಿ ಇಲ್ಲ.ಅಪನಂಬಿಕೆ ಹೆಚ್ಚಾಗಿದೆ.
ಯುವಶಕ್ತಿ ಹಣ ಮತ್ತು ಪ್ರೇಮದ ಮೋಹಕ್ಕಾಗಿ ದಾರಿ ಬಿಡುತ್ತಿದೆ.ಸಮಾಜ ಸರಿ ದಾರಿಗೆ ತರುವಲ್ಲಿ ಮಠಾಧೀಶರ ಪಾತ್ರ ಶ್ರೇಷ್ಠವಾಗಿದೆ ಎಂದು ಬಹು ಮಾರ್ಮಿಕವಾಗಿ ನುಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಹೇಮಾವತಿ ಪಾಟೀಲ್ ಧರ್ಮದ ಆಚರಣೆ ಕುರಿತು ಮಾತನಾಡಿದರು.
ಕೊನೆಯಲ್ಲಿ ಮೇಹಕರ,ತಡೋಳಾ ಮತ್ತು ಡೋಣಗಾಪುರದ ರಾಜೇಶ್ವರ ಶಿವಾಚಾರ್ಯರು ,ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು
ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ,ಪ್ರಮುಖರಾದ ಸುಭಾಷರಾವ ಬಿರಾದಾರ,ಬಾಬುರಾವ ಧೂಪೆ ,ರಾಜಶೇಖರ ಚಿದ್ರಿ,ಶಾಂತವೀರ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.























