
ಬೀದರ್, :ಮಾ.೨: ಭಾರತೀಯ ಬೌದ್ಧ ಮಹಾಸಭೆ ಬೀದರ ವತಿಯಿಂದ ನಗರದ ಸಿದ್ಧಾರ್ಥ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ೮ ದಿನಗಳ ಧಮ್ಮ ಪ್ರವಚನ ಮಾಲಿಕೆಯ ಕಾರ್ಯಕ್ರಮದಲ್ಲಿ ದಿನಾಂಕ ೨೮-೦೨-೨೦೨೬ ರಂದು ಡಾ. ಕಲ್ಯಾಣ ಶಿರಿ ಅವರು ಭಗವಾನ್ ಬುದ್ಧರು ಬೋಧಿಸಿದ ನಾಲ್ಕು ಬ್ರಹ್ಮವಿಹಾರಗಳ ಕುರಿತು ವಿಶ್ಲೇಷಣಾತ್ಮಕ ಉಪನ್ಯಾಸ ನೀಡಿದರು.
ಬ್ರಹ್ಮ ಎಂದರೆ ಸಾಮಾನ್ಯವಾಗಿ ದೇವರು ಎಂಬ ಪರಿಕಲ್ಪನೆ ಇದ್ದರೂ, ಬ್ರಹ್ಮವೆಂದರೆ ದೇವರಲ್ಲ; ಅದು ಉನ್ನತ ಮತ್ತು ಶ್ರೇಷ್ಠ ಮಾನಸಿಕ ಸ್ಥಿತಿ ಎಂದು ಅವರು ತಿಳಿಸಿದರು. ಪಾಲಿಭಾಷೆಯಲ್ಲಿ ಇದನ್ನು “ಬ್ರಹ್ಮವಿಹಾರ” ಎಂದು ಕರೆಯಲಾಗುತ್ತದೆ. ಅವುಗಳೆಂದರೆ ಮೆತ್ತ (ಮೈತ್ರಿ), ಕರುಣಾ, ಮುದಿತಾ ಮತ್ತು ಉಪೇಕ್ಷೆ.
ಮೊದಲನೆಯದಾದ ಮೆತ್ತ (ಮೈತ್ರಿ) ಎಲ್ಲ ಜೀವಿಗಳ ಮೇಲಿನ ಪ್ರೀತಿಭಾವವಾಗಿದೆ. ಇದು ಕೇವಲ ನಮಗೆ ಇಷ್ಟವಾದವರ ಮೇಲೆ ಮಾತ್ರವಲ್ಲ, ವೈರಿಗಳ ಮೇಲೂ ಪ್ರೀತಿ ತೋರುವ ವಿಶಾಲ ಮನೋಭಾವವಾಗಿದ್ದು, ಕೋಪವನ್ನು ಕಡಿಮೆ ಮಾಡುತ್ತದೆ ಎಂದು ವಿವರಿಸಿದರು.
ಎರಡನೆಯದಾದ ಕರುಣಾ ಎಂದರೆ ಮತ್ತೊಬ್ಬರ ನೋವನ್ನು ನೋಡಿ ಮರುಗುವ ಭಾವ. ಕಾಡ್ಗಿಚ್ಚಿನ ಸಂದರ್ಭದಲ್ಲೂ ತನ್ನ ಶಕ್ತಿಗೆ ತಕ್ಕಂತೆ ಬೆಂಕಿ ಆರಿಸಲು ಪ್ರಯತ್ನಿಸಿದ ಗಿಣಿಯ ರೂಪಕ ಕಥೆಯನ್ನು ಉದಾಹರಿಸಿ, ಕರುಣಾಭಾವದ ಮಹತ್ವವನ್ನು ತಿಳಿಸಿದರು.
ಮೂರನೆಯದು ಮುದಿತಾ, ಅಂದರೆ ಇತರರ-eveಟಿ ವೈರಿಗಳ-ಯಶಸ್ಸಿನಲ್ಲಿ ಸಂತೋಷಪಡುವ ಮನಸ್ಥಿತಿ. ದ್ವೇಷ, ಜಿಗುಪ್ಸೆ ಮತ್ತು ಹೊಟ್ಟೆಕಿಚ್ಚನ್ನು ದೂರವಿಟ್ಟು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ನಾಲ್ಕನೆಯದು ಉಪೇಕ್ಷೆ (ಉಪೇಖಾ), ಜೀವನದಲ್ಲಿ ಸುಖ-ದುಃಖಗಳ ಸಂದರ್ಭದಲ್ಲೂ ಮನಸ್ಸನ್ನು ಸಮತೋಲನದಲ್ಲಿ ಇಡುವ ಸ್ಥಿತಿ. ಅತಿಯಾದ ದುಃಖ ಅಥವಾ ಅತಿಯಾದ ಸಂತೋಷ ಎರಡೂ ಮನಸ್ಸನ್ನು ವಿಚಲಿತಗೊಳಿಸಬಹುದು; ಆದ್ದರಿಂದ ಸಮತಾಭಾವ ಅವಶ್ಯಕ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆಯುಷ್ಮಾನ ಬಳಿರಾಮ ಕೆ ಅವರನ್ನು ಭಾರತೀಯ ಬೌದ್ಧ ಮಹಾಸಭೆ ವತಿಯಿಂದ ಸನ್ಮಾನಿಸಲಾಯಿತು. ಅವರು ಅಲ್ಪಸಂಖ್ಯಾತರಿಗೆ ಲಭ್ಯವಿರುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರಿಯ ಶಿಕ್ಷಕ ಶಿಬಿರದಲ್ಲಿ ಭಾಗವಹಿಸಿ ತೇರ್ಗಡೆಗೊಂಡ ಉಪಾಸಕರು, ಸಮತಾ ಸೈನಿಕ ದಳದಲ್ಲಿ ಪದೋನ್ನತಿ ಪಡೆದ ಸೈನಿಕರು ಹಾಗೂ ಬೌದ್ಧಾಚಾರ್ಯರಾಗಿ ಉತ್ತೀರ್ಣರಾದ ಮಾಜಿ ಶ್ರಾಮಣೇರರನ್ನು ಸನ್ಮಾನಿಸಲಾಯಿತು.
ಜಿಲ್ಲಾಧ್ಯಕ್ಷ ರಾಜಪ್ಪ ಗುನಳ್ಳಿಕರ್, ತಾಲೂಕಾಧ್ಯಕ್ಷ ಶಿವಕುಮಾರ ಸದಾಫೂಲೆ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಸಿಂಗೆ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಶಾಖೆಯ ಪದಾಧಿಕಾರಿಗಳು ಹಾಗೂ ನಗರದ ವಿವಿಧ ಓಣಿಗಳ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಿರೂಪಣೆಯನ್ನು ಆಯುಷ್ಮತಿ ಚಿದಂಬರೇಶ್ವರಿ, ಸ್ವಾಗತವನ್ನು ಆಯುಷ್ಮತಿ ರಂಗಮ್ಮ ಕಡ್ಡೆ ಹಾಗೂ ವಂದನಾರ್ಪಣೆಯನ್ನು ಸುಶೀಲಾ ಸಾಗರ ನೆರವೇರಿಸಿದರು.























