
ಅಥಣಿ : ನ್ಯಾಯವಾದಿ ಡಿ ಬಿ ಠಕ್ಕಣ್ಣವರ ಅವರು ಸುಮಾರು 20 ವರ್ಷಗಳಿಂದ ನ್ಯಾಯವಾದಿಗಳಾಗಿ ವೃತ್ತಿ ಮಾಡುತ್ತಿದ್ದು ವೃತ್ತಿಯೊಂದಿಗೆ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಸಮಾಜಸೇವೆ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿ ನ್ಯಾಯವಾದಿ ಹಾಗೂ ಸಮಾಜಸೇವಕ ಡಿ ಬಿ ಠಕ್ಕಣ್ಣವರ ಅವರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೃತ್ತಿಯಿಂದ ನ್ಯಾಯವಾದಿಯಾಗಿದ್ದರೂ ಸಮಾಜದ ಬಗೆಗಿನ ಕಳಕಳಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅವರ ಅನುಪಮ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮ ವೃತ್ತಿಪರ ಅನುಭವದ ಮೂಲಕ ನ್ಯಾಯದ ಪರವಾಗಿ ಧ್ವನಿ ಎತ್ತುತ್ತಾ, ಸಮಾಜದಲ್ಲಿ ಕಾನೂನಿನ ಅರಿವು ಮತ್ತು ನ್ಯಾಯದ ಮಹತ್ವವನ್ನು ಸಾರುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಸಮಾಜದ ವಿವಿಧ ವರ್ಗಗಳ ಜನರೊಂದಿಗೆ ಆತ್ಮೀಯ ಒಡನಾಟ ಹೊಂದಿ, ಸಾರ್ವಜನಿಕ ಹಿತಾಸಕ್ತಿಯ ಕಾರ್ಯಗಳಿಗೆ ಸದಾ ಸ್ಪಂದಿಸುತ್ತಿರುವುದು ಅವರ ವ್ಯಕ್ತಿತ್ವದ ವಿಶೇಷತೆಯಾಗಿದೆ.
ಇವರು ನೀರಾವರಿ ಮತ್ತು ಕಬ್ಬಿನ ಬೆಲೆಗಾಗಿ ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ ಮತ್ತು ಸರ್ಕಾರಿ ಕಾರ್ಯಕ್ರಮಗಳಾದ ಸ್ವಚ್ಛತಾ ಆಂದೋಲನ ಹಾಗೂ ಭೇಟಿ ಬಚಾವೋ ಬೇಟಿ ಪಡಾವೋ. ಗಿಡ ನೆಡುವ ಕಾರ್ಯಕ್ರಮ ಹಾಗೂ ಸ್ವಯಂ ಪ್ರೇರಣೆಯಿಂದ ತಾಲೂಕಿನ ಹಲವಾರು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡುವುದು ಮತ್ತು ನ್ಯಾಯಾಲಯಗಳ ಮೂಲಕ ಕೈಕೊಳ್ಳುವ ಕಾನೂನು ಅರಿವು ನೆರವು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಕಾನೂನುಗಳ ಕುರಿತು ಮಾಹಿತಿ ಒದಗಿಸುವುದು ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ತಾಲೂಕ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು ಈಗ ಸದ್ಯ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸುರಕ್ಷಾ ಪರಿಷತ್ತಿನ ರಾಜ್ಯ ಹಿರಿಯ ಉಪಾಧ್ಯಕ್ಷನಾಗಿ ಸಾಮಾಜಿಕ ಹಾಗೂ ಶೋಷಣೆಗೆ ಒಳಗಾದ ವ್ಯಕ್ತಿಗಳ ಸಮಸ್ಯೆಗಳ
ಪರಿಹಾರಗೋಸ್ಕರ್ ಹಲವಾರು ಇಲಾಖೆಗಳ ಮೂಲಕ ಸೇವೆ ಒದಗಿಸಿಕೊಡುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಅಥಣಿ ತಾಲೂಕ ಆಡಳಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.
ನ್ಯಾಯಾಲಯಗಳ ಕಲಾಪಗಳಲ್ಲಿ ಕನ್ನಡವನ್ನೇ ಬಳಸುತ್ತಾ ವೃತ್ತಿ ನಡೆಸಿಕೊಂಡು ಬಂದಿದ್ದು ಅವರ ಕನ್ನಡ ಅಭಿಮಾನ ಎತ್ತಿ ತೋರಿಸುತ್ತದೆ. ಕನ್ನಡ ನಾಡು, ನುಡಿ, ಸಂಸ್ಕøತಿಯ ಹಬ್ಬವಾದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಒಬ್ಬ ಸಮಾಜಮುಖಿ ವ್ಯಕ್ತಿಯ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸದ ಸಂಗತಿಯಾಗಿದೆ. ಈ ಪ್ರಶಸ್ತಿಯು ಅವರ ಸಮಾಜಸೇವೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಗಳಿಗೆ ಪ್ರೇರಣೆಯಾಗಲಿದೆ.





















