
ಕಲಬುರಗಿ,ಮೇ 11: ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಹಗರಣಗಳ ಕಾಂಗ್ರೆಸ್ ಸರ್ಕಾರವಾಗಿದೆ. ಕಲಬುರಗಿ ಸೇರಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ. ದಲಿತ, ಹಿಂದೂ, ವಿಶ್ವಕರ್ಮ ವಿರೋಧಿ ಸರ್ಕಾರ ಖಂಡಿಸಿ ಜೂನ್ 10 ರಂದು ಬೆಳಗ್ಗೆ 11 ಗಂಟೆಗೆ ಸರದಾರ ವಲ್ಲಭಭಾಯಿ ಪಟೇಲ್ ಸರ್ಕಲ್ ನಲ್ಲಿ ಸಿಎಂ ಸಿದ್ದರಾಮಯ್ಯನವರ ನಿದ್ದೆಯಂತೆ ಕುಂಭಕರ್ಣವೇಷ ಧರಿಸಿ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಒಬಿಸಿ ನಗರ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ದೊಡ್ಡ ಪ್ರಮಾಣದಲ್ಲಿ ಜನ ವಿರೋಧಿ ಆಡಳಿತ ನೀಡುತ್ತದೆ ಎಂದು ಯಾರೂ ಕೂಡ ಭಾವಿಸಿರಲಿಲ್ಲ. ಒಂದಲ್ಲಾ ಒಂದು ಇಲಾಖೆಯಲ್ಲಿ ಹಗರಣಗಳು ಬೆಳಕಿಗೆ ಬರುತ್ತಲೇ ಇವೆ. ಕಾಂಗ್ರೆಸ್ ಸರ್ಕಾರ ಹಗರಣದಲ್ಲಿ ಸಿಲುಕಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಹಗರಣದ ಸರಮಾಲೆಯಂತಿರುವ ಸರಕಾರದಲ್ಲಿ ವಿರೋಧ ಪಕ್ಷ ಧ್ವನಿ ಎತ್ತಿದರೂ ಮುಚ್ಚಿ ಹಾಕುವ ಕೆಲಸ ಸರ್ಕಾರ ಮಾಡುತ್ತಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ಅಬಕಾರಿ ಹಗಣ, ಗೃಹಲಕ್ಷ್ಮೀ ಹಗರಣ ಸೇರಿದಂತೆ ಹಲವಾರು ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಸರಕಾರದ ವಿರುದ್ಧ ಹೋರಾಟ ಮಾಡಲು ಅನಿವಾರ್ಯವಾಗಿದೆ. ಕೂಡಲೇ ಕಲಬುರಗಿ ಜಿಲ್ಲೆ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಎಚ್ಚತ್ತುಕೊಳ್ಳದಿದ್ದರೆ, ಬಿಜೆಪಿ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.























