Home ಜಿಲ್ಲೆ ಕಾಂಗ್ರೆಸ್ ನಾಯಕರ ವಿರುದ್ಧದ ಹೇಳಿಕೆ ಖಂಡನೀಯ : ಜೆಡಿಎಸ್ ಜಿಲ್ಲಾಧ್ಯಕ್ಷರ ವಿರುದ್ಧ ಹಣಮಂತ ದೊಡ್ಡಮನಿ ವಾಗ್ದಾಳಿ

ಕಾಂಗ್ರೆಸ್ ನಾಯಕರ ವಿರುದ್ಧದ ಹೇಳಿಕೆ ಖಂಡನೀಯ : ಜೆಡಿಎಸ್ ಜಿಲ್ಲಾಧ್ಯಕ್ಷರ ವಿರುದ್ಧ ಹಣಮಂತ ದೊಡ್ಡಮನಿ ವಾಗ್ದಾಳಿ

ಯಾದಗಿರಿ:ಮೇ.೧೩:ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಮುಖಂಡರಾದ ಶರಣಪ್ಪ ಮಾನೇಗಾರ ಮತ್ತು ಬಸರೆಡ್ಡಿ ಅನಪುರ ಅವರ ಕುರಿತು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್‌ಚಂದ್ರ ಕಟಕಟಿ ಆಡಿದ ಹೇಳಿಕೆಗಳು ರಾಜಕೀಯ ಸಂಸ್ಕೃತಿಗೆ ಧಕ್ಕೆ ತರುವಂತಿವೆ ಎಂದು ಗುರುಮಠಕಲ್ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡ ಹಣಮಂತ ದೊಡ್ಡಮನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪ್ರಕಟಣೆ ನೀಡಿದ ಅವರು, “ಮಾತನಾಡುವ ಮುನ್ನ ಯೋಚಿಸುವ ಸಂಸ್ಕೃತಿ ರಾಜಕೀಯ ನಾಯಕರಿಗೆ ಅಗತ್ಯ. ಆದರೆ ಸುಭಾಷ್‌ಚಂದ್ರ ಕಟಕಟಿ ಅವರು ಮೆದುಳಿಗೂ ನಾಲಿಗೆಗೂ ಸಂಬAಧವಿಲ್ಲದ ರೀತಿಯಲ್ಲಿ ಮಾತನಾಡುವ ಮೂಲಕ ತಮ್ಮ ರಾಜಕೀಯ ಪ್ರೌಢಿಮೆಯನ್ನು ತಾವೇ ಪ್ರಶ್ನೆಗೆ ಒಳಪಡಿಸಿದ್ದಾರೆ” ಎಂದು ಕಿಡಿಕಾರಿದರು.

ಶರಣಪ್ಪ ಮಾನೇಗಾರ ಮತ್ತು ಬಸರೆಡ್ಡಿ ಅನಪುರ ಅವರ ವಿರುದ್ಧದ ಲಘು ಮಾತುಗಳು ಅವರ ಅಭಿಮಾನಿ ಬಳಗದಲ್ಲಿ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿವೆ. ಜನಬೆಂಬಲ ಹೊಂದಿರುವ ನಾಯಕರ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದನ್ನು ಬಿಟ್ಟು, ರಾಜಕೀಯ ಚರ್ಚೆಗಳನ್ನು ವಿಚಾರಧಾರೆ ಮಟ್ಟದಲ್ಲಿ ನಡೆಸುವುದು ಒಳಿತು ಎಂದು ಸಲಹೆ ನೀಡಿದರು.

ಗುರುಮಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಬಲವಾಗುತ್ತಿರುವುದೇ ಜೆಡಿಎಸ್ ನಾಯಕರ ಆತಂಕಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ ದೊಡ್ಡಮನಿ, “ಇಂದು ಹಳ್ಳಿ ಹಳ್ಳಿಗೆ ತೆರಳಿ ಜನರ ನಡುವೆ ಸಕ್ರಿಯವಾಗಿರುವುದು ಕಾಂಗ್ರೆಸ್ ನಾಯಕರ ಪ್ರಭಾವದಿಂದಲೇ. ಜಾತ್ರೆ, ಮದುವೆ, ಸಣ್ಣ ಸಮಾರಂಭಗಳಲ್ಲೂ ಜನರ ಸಂಪರ್ಕ ಬೆಳೆಸುತ್ತಿರುವ ಶರಣಪ್ಪ ಮಾನೇಗಾರ ಹಾಗೂ ಬಸರೆಡ್ಡಿ ಅನಪುರ ಅವರ ಸಂಘಟನಾ ಸಾಮರ್ಥ್ಯವೇ ಜೆಡಿಎಸ್ ನಾಯಕರಿಗೆ ನಿದ್ದೆ ಬರದಂತೆ ಮಾಡಿದೆ” ಎಂದು ವ್ಯಂಗ್ಯವಾಡಿದರು.

ಶರಣಪ್ಪ ಮಾನೇಗಾರ ಅವರ ಕುಟುಂಬವು ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದು, ಪರಿಶ್ರಮ ಮತ್ತು ಜನಸೇವೆಯ ಮೂಲಕ ಜನಮನ ಗೆದ್ದಿದೆ. ಅಂತಹ ನಾಯಕರ ವಿರುದ್ಧ ಮಾತನಾಡುವ ಮುನ್ನ ಅವರ ರಾಜಕೀಯ ಹಾದಿ ಹಾಗೂ ಜನಪ್ರಿಯತೆಯನ್ನು ಅರಿತುಕೊಳ್ಳಬೇಕು ಎಂದರು.

ಟಿಕೆಟ್ ನೀಡುವುದು ಪಕ್ಷದ ಹೈಕಮಾಂಡ್ ಹಾಗೂ ಜನರ ಆಶೀರ್ವಾದಕ್ಕೆ ಸಂಬAಧಿಸಿದ ವಿಷಯವಾಗಿದ್ದು, ಅದರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು ರಾಜಕೀಯ ನೈತಿಕತೆಗೆ ವಿರುದ್ಧವಾಗಿದೆ ಎಂದು ಟೀಕಿಸಿದರು

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿರುವ ಸುಭಾಷ್‌ಚಂದ್ರ ಕಟಕಟಿ ಅವರು ಇಡೀ ಜಿಲ್ಲೆಯ ಸಂಘಟನೆ ಕಡೆ ಗಮನ ಹರಿಸಬೇಕಾಗಿದ್ದು, ಕೇವಲ ಗುರುಮಠಕಲ್ ಕ್ಷೇತ್ರದ ನಾಯಕರ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದರಲ್ಲಿ ತೊಡಗಿರುವುದು ಅವರ ಅಸಹಾಯಕತೆಯನ್ನು ತೋರಿಸುತ್ತದೆ ಎಂದು ದೊಡ್ಡಮನಿ ಆರೋಪಿಸಿದರು.

ಗುರುಮಠಕಲ್ ಕ್ಷೇತ್ರದಲ್ಲಿ ೪೦ ಸಾವಿರಕ್ಕೂ ಹೆಚ್ಚು ಜನ ಜೆಡಿಎಸ್ ಸದಸ್ಯತ್ವ ಪಡೆದಿದ್ದಾರೆ ಎಂಬ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಹಣಮಂತ ದೊಡ್ಡಮನಿ ಆರೋಪಿಸಿದರು. ಕೆಲ ಗ್ರಾಮಗಳಲ್ಲಿ ಯುವಕರು ಮತ್ತು ಅನಕ್ಷರಸ್ಥರ ಮೊಬೈಲ್ ಪಡೆದು, ಓಟರ್ ಐಡಿ ಮಾಡಿಸುವ ನೆಪದಲ್ಲಿ ಸದಸ್ಯತ್ವ ನೋಂದಣಿ ಮಾಡಲಾಗಿದೆ ಎಂದು ದೂರಿದರು. ಕೆಲವೇ ಕಾರ್ಯಕರ್ತರನ್ನು ವೇದಿಕೆಗೆ ಕರೆದು ಸಾವಿರಾರು ಜನ ಪಕ್ಷ ಸೇರ್ಪಡೆಯಾಗಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದರು.

ಕ್ಷೇತ್ರದಲ್ಲಿ ಸೋಲಾರ್ ಹೈಮಾಸ್ಕ್ ಲೈಟ್ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಅವರು, “೨-೩ ಲಕ್ಷ ಮೌಲ್ಯದ ಕಾಮಗಾರಿಗಳಿಗೆ ೧೦ ಲಕ್ಷ ಅನುದಾನ ತೋರಿಸಿ ಕೋಟ್ಯಂತರ ರೂಪಾಯಿ ದುರುಪಯೋಗ ಮಾಡಲಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಶಾಸಕರ ಪರವಾಗಿ ದೇವರ ಆಣೆ ಮಾಡುತ್ತೇನೆ ಎನ್ನುವುದು ಯಾವ ನೈತಿಕತೆ?” ಎಂದು ಪ್ರಶ್ನಿಸಿದರು.

ಕ್ಷೇತ್ರದ ಜನತೆ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹಣಮಂತ ದೊಡ್ಡಮನಿ ಎಚ್ಚರಿಸಿದರು.