
ಕಲಬುರಗಿ,ಮೇ 30: ಜಿಲ್ಲೆಯ ಪ್ರತಿಷ್ಠಿತ ಎಸ್ಆರ್ಎನ್ ಮೆಹತಾ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿನಿ ತನ್ವಿ ಚೈತನ್ಯ ಕೋಠಾರಿ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ಇಸ್ರೋ ) ಆಯೋಜಿಸಿರುವ ಪ್ರತಿಷ್ಠಿತ ಯುವ ವಿಜ್ಞಾನಿ ಕಾರ್ಯಕ್ರಮ ಯುವಿಕಾ 2026 ಕ್ಕೆ ಆಯ್ಕೆಯಾಗಿದ್ದಾರೆ.
ಇದರಲ್ಲಿ ಒಟ್ಟು ಸುಮಾರು 456 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಅದರಲ್ಲಿ ಕರ್ನಾಟಕದಿಂದ ಆಯ್ಕೆಯಾದ 12 ವಿದ್ಯಾರ್ಥಿಗಳಲ್ಲಿ ಉತ್ತರ ಕರ್ನಾಟಕ ಪ್ರದೇಶದಿಂದ ತನ್ವಿ ಚೈತನ್ಯ ಕೋಠಾರಿ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ. ಅಲ್ಲದೇ ಬೆಂಗಳೂರಿನ ಯು. ಆರ್. ರಾವ್ ಸ್ಯಾಟಲೈಟ್ ಸೆಂಟರ್ ನಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂತರಿಕ್ಷ ವಿಜ್ಞಾನ ಹಾಗೂ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಅಮೂಲ್ಯ ಅನುಭವವನ್ನು ಪಡೆದಿದ್ದಾರೆ.
ಈ ಅದ್ಭುತ ಸಾಧನೆಗಾಗಿ ಶಾಲೆಯ ಚೆರ್ಮನ್ ಪ್ರೀತಮ್ ಮೆಹತಾ, ವ್ಯವಸ್ಥಾಪಕರಾದ ಚಕೋರ ಮೆಹತಾ, ಪ್ರಾಂಶುಪಾಲ ರಾಜಶೇಖರ ರೆಡ್ಡಿ ಹಾಗೂ ಸಿಬ್ಬಂದಿ ವರ್ಗದವರು ತನ್ವಿಗೆ ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ದೊರೆಯಲಿ ಎಂದು ಹಾರೈಸಿದ್ದಾರೆ.
























