Home ಜಿಲ್ಲೆ ಬೆಂಗಳೂರು ಸಾವಿನಲ್ಲೂ ಸಾರ್ಥಕತೆ ಮೆರೆದ ಶ್ರೀಲಕ್ಷ್ಮಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಶ್ರೀಲಕ್ಷ್ಮಿ

ಬೆಂಗಳೂರು, ಮೇ೧೦: ಮೃತ್ಯುವಿನ ನಂತರವೂ ಮತ್ತೊಬ್ಬರ ಬಾಳಿನಲ್ಲಿ ಬೆಳಕಾಗುವ ಉದಾತ್ತ ಗುಣಕ್ಕೆ ಸಾಕ್ಷಿಯಾದ ಶ್ರೀನಗರದ ನಿವಾಸಿ ಶ್ರೀಲಕ್ಷ್ಮಿ (೪೩) ಅವರ ಅಂಗಾಂಗ ದಾನದ ನಿರ್ಧಾರ ಇಂದು ಹಲವು ಕುಟುಂಬಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಇವರ ಲಿವರ್ ಮತ್ತು ಕಿಡ್ನಿಗಳನ್ನು ಸ್ವೀಕರಿಸಿದ ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.


ಮೇ ೧, ರಂದು ಸಂಭವಿಸಿದ ದುರದೃಷ್ಟಕರ ಘಟನೆಯಿಂದಾಗಿ ತೀವ್ರ ಗಾಯಗೊಂಡಿದ್ದ ಶ್ರೀಲಕ್ಷ್ಮಿ ಅವರಿಗೆ ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮಿದುಳು ನಿಷ್ಕ್ರಿಯ ಸ್ಥಿತಿಗೆ ತಲುಪಿದ್ದರು.


ತೀವ್ರ ದುಃಖದ ನಡುವೆಯೂ ಶ್ರೀಲಕ್ಷ್ಮಿ ಅವರ ಪತಿ, ಪುತ್ರ ಹಾಗೂ ಪೋಷಕರು ತೋರಿದ ಸಾಮಾಜಿಕ ಕಳಕಳಿ ಶ್ಲಾಘನೀಯ. ವೈಯಕ್ತಿಕ ನಷ್ಟದ ನೋವಿನಲ್ಲೂ ಅನ್ಯರ ಜೀವ ಉಳಿಸುವ ಸಲುವಾಗಿ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ವಿಕ್ಟೋರಿಯಾ ಆಸ್ಪತ್ರೆಯ ಪ್ರಮುಖರಾದ ಡಾ. ಕಾವ್ಯ (ಡೀನ್ ಮತ್ತು ನಿರ್ದೇಶಕರು): “ಕುಟುಂಬದ ಈ ನಿಸ್ವಾರ್ಥ ನಿರ್ಧಾರವು ಅತ್ಯಂತ ಧೈರ್ಯದ ಕೆಲಸವಾಗಿದೆ. ಶ್ರೀಲಕ್ಷ್ಮಿ ಅವರ ಭೌತಿಕ ಶರೀರ ಇಂದು ನಮ್ಮೊಂದಿಗಿಲ್ಲದಿದ್ದರೂ, ಅವರು ನೀಡಿದ ಜೀವದಾನದ ಮೂಲಕ ಅವರು ಹಲವರ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದು ಹೇಳಿದ್ದಾರೆ.


ವೈದ್ಯಕೀಯ ಅಧೀಕ್ಷಕರು ಡಾ. ದೀಪಕ್ ಎಸ್ “ಅಂಗಾಂಗ ದಾನವು ಮಾನವೀಯ ಸೇವೆಯ ಅತ್ಯುನ್ನತ ರೂಪವಾಗಿದೆ. ಒಬ್ಬ ದಾನಿ ಏಳು ಜನರ ಜೀವ ಉಳಿಸಬಹುದು. ಸಾರ್ವಜನಿಕರು ಈ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು.”


ವಿಶೇಷಾಧಿಕಾರಿ, ಟ್ರಾಮಾ ಸೆಂಟರ್ ಡಾ. ಅಸೀಮಾ ಭಾನು “ವೈಯಕ್ತಿಕ ದುರಂತವನ್ನು ಮತ್ತೊಬ್ಬರ ಬದುಕಿನ ಸಂಭ್ರಮವನ್ನಾಗಿ ಪರಿವರ್ತಿಸಿದ ಶ್ರೀಲಕ್ಷ್ಮಿ ಅವರ ಕುಟುಂಬದ ಶಕ್ತಿ ಮತ್ತು ತ್ಯಾಗಕ್ಕೆ ನಮ್ಮ ನಮನಗಳು ಎಂದು ಹೇಳಿದರು.


ಕುಟುಂಬದವರು ತಮ್ಮ ಪ್ರೀತಿಯ ಶ್ರೀಲಕ್ಷ್ಮಿ ಅವರನ್ನು ನೆನೆಯುತ್ತಾ, “ಅವರು ಕೇವಲ ಪತ್ನಿ ಅಥವಾ ತಾಯಿಯಾಗಿರಲಿಲ್ಲ, ಬದಲಿಗೆ ಪ್ರೀತಿ ಮತ್ತು ಸಹಾನುಭೂತಿಯ ಸಾಗರವಾಗಿದ್ದರು. ತಮ್ಮ ಕಿರುನಗೆಯ ಮೂಲಕ ಎಲ್ಲರನ್ನೂ ಸದಾ ಸಂತೋಷವಾಗಿಡುತ್ತಿದ್ದ ಅವರು, ಇಂದು ಸಾವಿನ ನಂತರವೂ ಮತ್ತೊಬ್ಬರಿಗೆ ಬದುಕುವ ದಾರಿ ತೋರಿಸಿದ್ದಾರೆ,” ಎಂದು ಭಾವುಕರಾದರು.ಅಂಗಾಂಗ ದಾನದ ಈ ಮಹತ್ವದ ನಿರ್ಧಾರವು ಸಮಾಜಕ್ಕೆ ಒಂದು ಪ್ರೇರಕ ಶಕ್ತಿಯಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆಯಬಹುದು ಎಂಬುದಕ್ಕೆ ದಾರಿದೀಪವಾಗಿದೆ.