
ಕಲಬುರಗಿ,ಅ.17-ಸ್ಟಿಂಗ್ ಆಪರೇಷನ್ ವಿಚಾರವಾಗಿ ಲಗಾಮು ಇಲ್ಲದಂತೆ ಹಗುರವಾಗಿ ಮಾತನಾಡುವದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಶೋಭೆ ತರುವದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ತಮ್ಮದೇ ಆದ ತತ್ವ ಸಿದ್ದಾಂತದ ಪ್ರಕಾರ ರಾಜಕೀಯ ಮಾಡುತ್ತಾ ಬಂದಿದ್ದಾರೆ. ಸಚಿವ ಕುಮಾರಸ್ವಾಮಿಯಂತೆ ಅಧಿಕಾರದ ಆಸೆಗಾಗಿ ಎಂದೂ ತಪ್ಪು ನಡೆದುಕೊಂಡವರಲ್ಲ.ಕೇಂದ್ರ ಸಚಿವ ಕುಮಾರಸ್ವಾಮಿಯವರು ಜಾತ್ಯಾತೀತ ಪಕ್ಷದ ನಾಯಕನೆಂದು ಹೇಳಿಕೊಂಡು ಜಾತ್ಯಾತೀತ ಪಕ್ಷದ ಎಲ್ಲಾ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ಅಧಿಕಾರದ ಆಸೆಗಾಗಿ ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಿ ಕೇಂದ್ರ ಸಚಿವರಾಗಿದ್ದಾರೆ. ಕೇಂದ್ರದಲ್ಲಿ ಇವರಿಗೆ ಯಾರೂ ಕೇಳದ ಕಾರಣ ರಾಜ್ಯ ರಾಜಕಾರಣದಲ್ಲಿ ಕೈಹಾಕುತ್ತಾ ಕಾಂಗ್ರೆಸ್ ಹಿರಿಯ ವರಿಷ್ಠ ನಾಯಕರಿಗೆ ಏಕವಚನದಲ್ಲಿ ಮಾತನಾಡಿರುವುದನ್ನು ಅವರು ಖಂಡಿಸಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಅಭಿವೃದ್ಧಿ ಹರಿಕಾರರೆಂದು ಹೆಸರು ಮಾಡಿದ್ದಾರೆ. ಹಗಲು ರಾತ್ರಿ ಎನ್ನದೇ ಜನಸಾಮಾನ್ಯರ ಕೆಲಸಗಳನ್ನು ಮಾಡುತ್ತಾ ಸಾಗಿದ್ದಾರೆ. ಕುಮಾರಸ್ವಾಮಿಯಂತೆ ಅಧಿಕಾರಕ್ಕಾಗಿ
ಪಕ್ಷದ ಮೌಲ್ಯಗಳನ್ನು ದಿಕ್ಕುಪಾಲು ಮಾಡಿ ಕೊಮುವಾದಿ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡವರಲ್ಲ. ಕುಮಾರಸ್ವಾಮಿ ಎಂತವರು ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಹಿಂದೆ ಸರಿಯುವದಿಲ್ಲ ಎಂಬುದು ಈಗಾಗಲೇ ರಾಜ್ಯದ ಜನತೆಗೆ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಜೆಡಿ (ಎಸ್) ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಇದರಿಂದ ಗಾಬರಿಗೊಂಡು ಕುಮಾರಸ್ವಾಮಿಯವರು
ಏನೂ ತಿಳಿಯದೇ ಹಗುರವಾಗಿ ಮಾತನಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ ರವರು ಮುಖ್ಯಮಂತ್ರಿಯಾದ ನಂತರ ಕುಮಾರಸ್ವಾಮಿಯವರಿಗೆ ಹೊಟ್ಟೆಕಿಚ್ಚು ಉಂಟಾಗಿ ಭಯಭೀತರಾಗಿ ಹಿರಿಯ ನಾಯಕರಿಗೆ ಕೀಳು ಮಟ್ಟದ ಶಬ್ದ ಉಪಯೋಗಿಸಿ ಮಾತನಾಡುತ್ತಿದ್ದಾರೆ. ಕೇಂದ್ರ ಸಚಿವರಾಗಿ ಮಾಜಿ ಮುಖ್ಯಮಂತ್ರಿಗಳಾದ ಇವರಿಗೆ ಈ ರೀತಿ ಮಾತನಾಡುವದು ಶೋಭೆ ತರುವಂತದ್ದಲ್ಲ, ಹಿರಿಯರ ಕುರಿತು ಮಾತನಾಡುವಾಗ ಸರಿಯಾಗಿ ತಿಳಿದುಕೊಂಡು ಸಮತೋಲನದಲ್ಲಿ ಮಾತನಾಡಬೇಕು ಎಂದಿದ್ದಾರೆ.






















