
ಶಿವಮೊಗ್ಗ, ಅ. ೩೦– ಸರ್ವರ್ ಡೌನ್ ತಾಂತ್ರಿಕ ಸಮಸ್ಯೆಯಿಂದ ಪಡಿತರ ಧಾನ್ಯ ಪಡೆಯಲು ನಾಗರಿಕರು ಪರದಾಡುವಂತಾಗಿದೆ. ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವುದರ ಜೊತೆಗೆ, ಅಂಗಡಿಗಳ ಬಳಿ ಗಂಟೆಗಟ್ಟಲೆ ಕಾದು ನಿಲ್ಲುವಂತಾಗಿದೆ ಎಂಬ ದೂರುಗಳು ಪಡಿತರದಾರರಿಂದ ಕೇಳಿಬರಲಾರಂಭಿಸಿದೆ!
ಕಳೆದ ಕೆಲ ದಿನಗಳಿಂದ ಸರ್ವರ್ ಡೌನ್ ಸಮಸ್ಯೆ ಎದುರಾಗಿದ್ದು, ಹೆಬ್ಬೆಟ್ಟಿನ ಬಯೋಮೆಟ್ರಿಕ್ ವಿವರ ದಾಖಲಿಸಲು ಅಂಗಡಿಗಳ ಬಳಿ ಕಾದು ಕುಳಿತುಕೊಳ್ಳುವಂತಾಗಿದೆ. ತಮ್ಮೆಲ್ಲ ಕೆಲಸಕಾರ್ಯ ಬಿಟ್ಟು ಪಡಿತರ ಧಾನ್ಯ ಪಡೆಯಲು ಅಲೆದಾಡುವಂತಾಗಿದೆ ಎಂದು ಕೆಲ ಪಡಿತರ ಚೀಟಿದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
‘ಪಡಿತರ ಪಡೆಯಲು ರೇಷನ್ ಶಾಪ್ ಗೆ ಹೋದರೆ ಸರ್ವರ್ ಡೌನ್ ಸಮಸ್ಯೆ ಎಂದು ಹೇಳುತ್ತಾರೆ. ಗಂಟೆಗಟ್ಟಲೆ ಕಾಯುವಂತಾಗಿದೆ. ಎರಡು ದಿನ ಅಂಗಡಿಗೆ ಅಲೆದಾಡಿ ಪಡಿತರ ಧಾನ್ಯ ಪಡೆಯುವಂತಾಯಿತು. ಇದರಿಂದ ನಮ್ಮಗಳ ದೈನಂದಿನ ಕೆಲಸಕಾರ್ಯಗಳ ಮೇಲೆ ಪರಿಣಾಮ ಬೀರುವಂತಾಗಿದೆ’ ಎಂದು ಪಡಿತರ ಚೀಟಿದಾರರೋರ್ವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ನ್ಯಾಯಬೆಲೆ ಅಂಗಡಿಗಳು ಮಾಲೀಕರು, ಸಿಬ್ಬಂದಿಗಳು ಕೂಡ ಸರ್ವರ್ ಡೌನ್ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ‘ತಾಂತ್ರಿಕ ಸಮಸ್ಯೆಯ ಮಾಹಿತಿಯ ಅರಿವಿಲ್ಲದೆ, ಕೆಲ ಪಡಿತರದಾರರು ನಮ್ಮೊಂದಿಗೆ ಜಗಳಕ್ಕಿಳಿಯುತ್ತಿದ್ದಾರೆ. ಕೆಲವೊಮ್ಮೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಂಗಡಿ ತೆರೆದು ಕುಳಿತುಕೊಳ್ಳುವಂತಾಗಿದೆ.
ಕೆಲವೊಮ್ಮೆ ಸರ್ವರ್ ಸಿಗದಿದ್ದರೆ, ಮತ್ತೆ ಕೆಲವೊಮ್ಮೆ ಸರ್ವರ್ ಸ್ಲೋ ಆಗಿ ಆಹಾರ ಇಲಾಖೆಯ ಸಂಬಂಧಿತ ವೆಬ್ ಪುಟಗಳು ತೆರೆದುಕೊಳ್ಳುವುದು ವಿಳಂಬವಾಗುತ್ತದೆ. ಒಂದು ಕಾರ್ಡ್ ವಿವರ ಹಾಗೂ ಬಯೋಮೆಟ್ರಿಕ್ ವಿವರ ಎಂಟ್ರಿ ಮಾಡಲು ಹಲವು ನಿಮಿಷಗಳೇ ಆಗುತ್ತದೆ.
ಆಹಾರ ಇಲಾಖೆಯ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದರೆ, ನಮ್ಮ ಹಂತದಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಬೆಂಗಳೂರಿನ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳುತ್ತಾರೆ’ ಎಂದು ನ್ಯಾಯಬೆಲೆ ಅಂಗಡಿಯ ಮಾಲೀಕರೋರ್ವರು ತಿಳಿಸುತ್ತಾರೆ.
ಪರಿಹರಿಸಲಿ : ಸರ್ವರ್ ಡೌನ್ ಸಮಸ್ಯೆಯಿಂದ ಕೆಲ ಪಡಿತರದಾರರು ಕಾಲಮಿತಿಯೊಳಗೆ ದವಸ ಧಾನ್ಯ ಪಡೆಯಲು ಆಗದಂತಾಗಿದೆ. ತಕ್ಷಣವೇ ಆಹಾರ ಇಲಾಖೆ ಇತ್ತ ಗಮನಹರಿಸಬೇಕು. ಸರ್ವರ್ ಡೌನ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂಬುವುದು ಪಡಿತರ ಚೀಟಿದಾರರ ಆಗ್ರಹವಾಗಿದೆ.
























