
ನವದೆಹಲಿ, ಅ.೧೭: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಅವರು ಎದೆ ಸೋಂಕಿನ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿ ಸುಮಾರು ೭.೩೦ಕ್ಕೆ ಆಸ್ಪತ್ರೆಗೆ ದಾಖಲಾದ ಅವರಿಗೆ ಶ್ವಾಸಕೋಶ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೂ ಮೊದಲು, ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಮೇ ತಿಂಗಳಲ್ಲಿಯೂ ಅಡ್ವಾಣಿ ಅವರು ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ದಿನಗಳ ಚಿಕಿತ್ಸೆಯ ಬಳಿಕ ಬಿಡುಗಡೆಯಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ ೭ರಂದು ನವದೆಹಲಿಯಲ್ಲಿರುವ ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ೨೫ ವರ್ಷಗಳ ಸಾರ್ವಜನಿಕ ಆಡಳಿತದ ಮೈಲಿಗಲ್ಲು ತಲುಪಿದ ಹಿನ್ನೆಲೆಯಲ್ಲಿ ಈ ಭೇಟಿ ನೀಡಿದ್ದರು. ಅಡ್ವಾಣಿ ಅವರ ದಶಕಗಳ ಸಾರ್ವಜನಿಕ ಸೇವೆ ಮತ್ತು ದೇಶದ ಪ್ರಗತಿಗೆ ಅವರು ನೀಡಿದ ಕೊಡುಗೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದರು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಅಡ್ವಾಣಿ ಅವರು ೧೯೯೯ರಿಂದ ೨೦೦೪ರವರೆಗೆ ಕೇಂದ್ರ ಗೃಹ ಸಚಿವರಾಗಿದ್ದರು. ೨೦೦೨ರಿಂದ ೨೦೦೪ರವರೆಗೆ ಉಪಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದರು.
೧೯೨೭ರ ನವೆಂಬರ್ ೮ರಂದು ಕರಾಚಿಯಲ್ಲಿ ಜನಿಸಿದ ಅಡ್ವಾಣಿ ಅವರು ೧೯೪೨ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್ಎಸ್ಎಸ್) ಸೇರ್ಪಡೆಯಾಗಿದ್ದರು. ೧೯೮೬ರಿಂದ ೧೯೯೦, ೧೯೯೩ರಿಂದ ೧೯೯೮ ಹಾಗೂ ೨೦೦೪ರಿಂದ ೨೦೦೫ರವರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.
ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ೨೦೨೫ರ ಮಾರ್ಚ್ನಲ್ಲಿ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.






















