Home ಜಿಲ್ಲೆ ಬೆಂಗಳೂರು ತೈಲ ದರ ತಗ್ಗಿಸಿ: ಮೋದಿ ಕರೆಗೆ ಆನಂದ್ ಟೀಕೆ

ತೈಲ ದರ ತಗ್ಗಿಸಿ: ಮೋದಿ ಕರೆಗೆ ಆನಂದ್ ಟೀಕೆ

ಬೆಂಗಳೂರು,ಮೇ.೧೨: “ಚಿನ್ನ ಖರೀದಿ ಬೇಡ, ತೈಲ ಬಳಕೆ ತಗ್ಗಿಸಿ” ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆ ಅತ್ಯಂತ ಬಾಲಿಶವಾದದ್ದು. ಜನರ ಖರೀದಿ ಸ್ವಾತಂತ್ರ್ಯ, ಮಾರುಕಟ್ಟೆ ಆಧಾರಿತ ಬೆಲೆ ನಿರ್ಧಾರ ಮತ್ತು ದೀರ್ಘಕಾಲೀನ ಹೂಡಿಕೆಗಳಿಗೆ ಇದು ವಿರುದ್ಧವಾಗಿದೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಟೀಕಿಸಿದ್ದಾರೆ.


ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೋದಿಯವರ ಈ ಕರೆ ಜನರ ಬದುಕಿನ ವಾಸ್ತವಿಕತೆಗಳನ್ನು ಗಮನಿಸದೇ ಕೇವಲ ರಾಜಕೀಯ ಪ್ರದರ್ಶನದಂತೆ ತೋರುತ್ತದೆ. ಜನರಿಗೆ ಪರ್ಯಾಯ ವ್ಯವಸ್ಥೆಗಳನ್ನು ಒದಗಿಸದೆ “ಬಳಕೆ ಕಡಿಮೆ ಮಾಡಿ” ಎಂದು ಹೇಳಿಕೆ ನೀಡುವುದು ಹೊಣೆಗಾರಿಕೆಯ ಕೊರತೆಯ ಸಂಕೇತವಾಗಿದೆ. ಜಾಗತಿಕ ಆರ್ಥಿಕ ಕುಸಿತ ತಡೆದ ಡಾ. ಮನಮೋಹನ್ ಸಿಂಗ್ ರೂಪಿಸಿದ ಆರ್ಥಿಕ ತತ್ವಗಳಿಗೆ ಇದು ವಿರುದ್ಧವಾಗಿದೆ. ೧೯೯೧ ರಲ್ಲಿ ದೇಶ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿ ದೇಶವನ್ನು ಗಂಡಾಂತರದಿಂದ ಪಾರು ಮಾಡಿತು. ೨೦೦೮ ರ ಜಾಗತಿಕ ಆರ್ಥಿಕ ಹಿಂಜರಿಕೆ ಸಂದರ್ಭದಲ್ಲಿ ದೇಶಕ್ಕೆ ಸ್ವಲ್ಪವೂ ತೊಂದರೆಯಾಗದಂತೆ ರಕ್ಷಿಸಿದ್ದರು. ಆದರೆ ಮೋದಿ ಅವರ ಕರೆ ಜನರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿದ್ದಾರೆ.


ಇದು ಜನರ ಖಾಸಗಿ ಖರ್ಚುಗಳನ್ನು ನಿಯಂತ್ರಿಸುವ ಪ್ರಯತ್ನವಾಗಿದೆ. ಜಾಗತಿಕ ತೈಲ ಬೆಲೆ ಏರಿಕೆ, ವಿದೇಶಿ ವಿನಿಮಯ ಸಂಗ್ರಹದ ಒತ್ತಡವನ್ನು ನಿಯಂತ್ರಿಸಲು ಸಾಕಷ್ಟು ಮಾರ್ಗಗಳಿವೆ. ಮನಮೋಹನ್ ಸಿಂಗ್ ಅವರು ಜನರ ಖರೀದಿ ಸ್ವಾತಂತ್ರ್ಯಕ್ಕೆ ಉತ್ತೇಜನ ನೀಡಿ ಮಾರುಕಟ್ಟೆಯಲ್ಲಿ ಹಣ ಹರಿಯಲು ಒತ್ತು ನೀಡಿದ್ದರು. ಒಂದು ವರ್ಷ ಚಿನ್ನ ಖರೀದಿ ಬೇಡ ಎಂದು ಕರೆ ನೀಡಿರುವುದು ಚಿನ್ನದ ಆಮದಿಂದ ಭಾರತಕ್ಕೆ ದೊಡ್ಡ ವಿದೇಶಿ ವಿನಿಮಯ ಹೊರೆಯಾಗಲಿದೆ. ಆದರೆ ಸಿಂಗ್ ಅವರ ದೃಷ್ಟಿಕೋನದಲ್ಲಿ ಚಿನ್ನ ಖರೀದಿ ಜನರ ಹೂಡಿಕೆ ಸ್ವಾತಂತ್ರ್ಯದ ಭಾಗ. ಸರ್ಕಾರವು ಜನರ ಖಾಸಗಿ ಹೂಡಿಕೆಗಳನ್ನು ನಿಯಂತ್ರಿಸುವ ಬದಲು, ಆರ್ಥಿಕತೆಯನ್ನು ಬಲಪಡಿಸುವ ಮೂಲಕ ವಿದೇಶಿ ವಿನಿಮಯ ಒತ್ತಡವನ್ನು ತಗ್ಗಿಸಬೇಕು ಎಂದು ಡಾ. ಆನಂದ ಕುಮಾರ್ ಕಿವಿ ಮಾತು ಹೇಳಿದ್ದಾರೆ.