
ಬೀದರ್:: ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕಾನೂನುಬದ್ಧ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ ಮೋರ್ಚಾ ಹಾಗೂ ಕಾರ್ಮಿಕ ಸಂಘಗಳ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿದ ಮುಖಂಡರು, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ, ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಶಹೀದ್ ಭಗತ್ಸಿಂಗ್ ಅವರ ಜನ್ಮದಿನದ ಅಂಗವಾಗಿ ಸಲ್ಲಿಸಿದ ಮನವಿಯಲ್ಲಿ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು. ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಎಕರೆಗೆ ?೫೦ ಸಾವಿರ ಹಾಗೂ ಕೃಷಿ ಕಾರ್ಮಿಕರ ಪ್ರತಿ ಕುಟುಂಬಕ್ಕೆ ?೫೦ ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಗ್ರಾಮೀಣ ಭಾಗದ ಅತಿಬಡವರು ಹಾಗೂ ನಿರ್ಗತಿಕರಿಗೆ ಆಹಾರ ಒದಗಿಸಲು ಗಂಜಿ ಕೇಂದ್ರ ಆರಂಭಿಸಬೇಕು. ನರೇಗಾ ಸೇರಿದಂತೆ ಗ್ರಾಮೀಣ ಉದ್ಯೋಗ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಗ್ರಾಮೀಣ ರಸ್ತೆಗಳು ಹಾಗೂ ಹೊಲದ ದಾರಿಗಳನ್ನು ಅಭಿವೃದ್ಧಿಪಡಿಸಬೇಕು. ಸಣ್ಣ ನೀರಾವರಿ ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಎಸ್ಎಸ್ಕೆ ಪುನರಾರಂಭಕ್ಕೆ ಒತ್ತಾಯ
ಬೀದರ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಬಿಎಸ್ಎಸ್ಕೆ ಹಳ್ಳಿಖೇಡ (ಬಿ) ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಲಾಯಿತು.
ಕಾರ್ಖಾನೆಯ ಬಾಕಿ ಹಣದಲ್ಲಿ ಕಾರ್ಮಿಕರ ವೇತನ ಸೇರಿದಂತೆ ಸುಮಾರು ?೩೮ ಕೋಟಿ ಪಾವತಿಸಬೇಕು. ೨೦೨೬ನೇ ಸಾಲಿನಲ್ಲಿ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್ಗೆ ?೫,೦೦೦ ದರ ನಿಗದಿಪಡಿಸಲು ರೈತರ ಸಭೆ ಕರೆಯಬೇಕು. ಕಳೆದ ಸಾಲಿನ ಕಬ್ಬಿನ ಬಾಕಿ ಹಣ ಪಾವತಿಸಿ, ಹಿಂದಿನ ಪದ್ಧತಿಯಂತೆ ರೈತರಿಗೆ ಸಕ್ಕರೆ ನೀಡಬೇಕು ಎಂದು ಆಗ್ರಹಿಸಿದರು.
ಯೋಜನಾ ನೌಕರರನ್ನು ಖಾಯಂಗೊಳಿಸಬೇಕು. ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಹಾಗೂ ಮೀಸಲಾತಿ ಜಾರಿಗೊಳಿಸಬೇಕು. ರೈತರ ಭೂಮಿಗಳ ಸರ್ಕಾರಿ ಸರ್ವೆ ಕಾರ್ಯವನ್ನು ಸರ್ಕಾರವೇ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸ್ವಾಮಿ, ಶಿವರಾಜ ಪಾಟೀಲ್ ಅತಿವಾಳ, ಶಿವರಾಯ ಮುದಾಳೆ, ನಜೀರ್ ಅಹ್ಮದ್, ಶಫಾಯತ್ ಅಲಿ, ವೀರಶೆಟ್ಟಿ ವಟ್ಟಂಬೆ, ಕೊಂಡಿಬಾರಾವ ಪಾಂಡ್ರೆ, ಧೂಳಪ್ಪ ಸೋರಳ್ಳಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.























