Home ಜಿಲ್ಲೆ ಕಂದಕೂರು ಪಿಯು ಕಾಲೇಜಿಗೆ ಹೈಟೆಕ್ ವ್ಯವಸ್ಥೆ ಕಲ್ಪಿಸಿ : ಅಧಿಕಾರಿಗಳಿಗೆ ಶಾಸಕ ಶರಣಗೌಡ ಖಡಕ್ ಸೂಚನೆ

ಕಂದಕೂರು ಪಿಯು ಕಾಲೇಜಿಗೆ ಹೈಟೆಕ್ ವ್ಯವಸ್ಥೆ ಕಲ್ಪಿಸಿ : ಅಧಿಕಾರಿಗಳಿಗೆ ಶಾಸಕ ಶರಣಗೌಡ ಖಡಕ್ ಸೂಚನೆ

ಯಾದಗಿರಿ:ಮೇ.8: ಗುರಮಠಕಲ್ ಕ್ಷೇತ್ರದ ಕಂದಕೂರು ಗ್ರಾಮಕ್ಕೆ ಸರ್ಕಾರದಿಂದ ನೂತನ ಪದವಿ ಪೂರ್ವ ಕಾಲೇಜು ಮಂಜೂರಾಗಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭಿಸಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಗುರುವಾರ ಕಂದಕೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಶಾಸಕ ಶರಣಗೌಡ, ನೂತನವಾಗಿ ಉನ್ನತೀಕರಿಸಲಾದ ಪದವಿ ಪೂರ್ವ ಕಾಲೇಜಿಗೆ ಅಗತ್ಯವಿರುವ ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, “ಇದು ನನ್ನ ಸ್ವಂತ ಊರು. ಕಂದಕೂರಿನಲ್ಲಿ ಪಿಯು ಕಾಲೇಜು ಸ್ಥಾಪನೆಯಾಗಬೇಕು ಎಂಬುದು ನಮ್ಮ ತಂದೆ, ಮಾಜಿ ಶಾಸಕರಾದ ದಿವಂಗತ ನಾಗನಗೌಡ ಅವರ ಬಹುದಿನಗಳ ಕನಸಾಗಿತ್ತು. ಅವರು ಶಾಸಕರಾಗಿದ್ದಾಗಲೇ ಕಾಲೇಜು ಸ್ಥಾಪನೆಗೆ ಸಾಕಷ್ಟು ಪ್ರಯತ್ನಿಸಿದ್ದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮೇಲೆ ನಿರಂತರ ಒತ್ತಡ ಹೇರಿದ ಪರಿಣಾಮ ಈ ವರ್ಷದಿಂದ ಸರ್ಕಾರ ಕಾಲೇಜು ಮಂಜೂರು ಮಾಡಿದೆ” ಎಂದು ತಿಳಿಸಿದರು.

“ಈ ಶೈಕ್ಷಣಿಕ ಸಾಲಿನಿಂದಲೇ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆಗುವಂತೆ ವಿಶೇಷ ಗಮನಹರಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರದ ಪಟ್ಟಣಗಳಿಗೆ ಅಲೆಯದಂತೆ ಸ್ಥಳೀಯವಾಗಿ ಉತ್ತಮ ಶಿಕ್ಷಣ ಸೌಲಭ್ಯ ಒದಗಿಸುವುದು ನಮ್ಮ ಉದ್ದೇಶ” ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದ ಮಹತ್ವದ ಕುರಿತು ಜಾಗೃತಿ ಮೂಡಿಸುವಂತೆ ಉಪನ್ಯಾಸಕರಿಗೆ ಸೂಚಿಸಿದ ಅವರು, “ಕಲಾ ವಿಭಾಗಕ್ಕಿಂತ ವಾಣಿಜ್ಯ ವಿಭಾಗದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ. ಬಿಕಾಂ, ಎಂಬಿಎ ಪದವಿ ಪಡೆದರೆ ಕಾರ್ಖಾನೆಗಳು ಹಾಗೂ ಖಾಸಗಿ ಉದ್ಯಮಗಳಲ್ಲಿ ಸಾವಿರಾರು ಉದ್ಯೋಗಗಳು ಲಭ್ಯವಾಗುತ್ತವೆ. ಹೀಗಾಗಿ ವಿದ್ಯಾರ್ಥಿಗಳನ್ನು ಕಾಮರ್ಸ್ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸಬೇಕು” ಎಂದರು.

ಸಭೆಯ ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿದ ಶಾಸಕ ಶರಣಗೌಡ, “ನಮ್ಮೂರಿನ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಹೋಗುವ ಪರಿಸ್ಥಿತಿ ತಪ್ಪಿಸಲು ಸ್ಥಳೀಯವಾಗಿ ಕಾಲೇಜು ಆರಂಭಿಸಲಾಗಿದೆ. ಗ್ರಾಮಸ್ಥರು ತಮ್ಮ ಮಕ್ಕಳನ್ನು ಹೊಸ ಕಾಲೇಜಿಗೆ ದಾಖಲಾತಿ ಮಾಡಿಸಬೇಕು” ಎಂದು ಮನವಿ ಮಾಡಿದರು.

“ಹೊಸ ಕಾಲೇಜಿಗೆ ಅಗತ್ಯವಿರುವ ಪೀಠೋಪಕರಣಗಳನ್ನು ನನ್ನ ಶಾಸಕರ ಅನುದಾನದಿಂದ ಒದಗಿಸಲಾಗುವುದು. ಉಪನ್ಯಾಸಕರು ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಹೈಟೆಕ್ ಕಾಲೇಜಾಗಿ ಅಭಿವೃದ್ಧಿಪಡಿಸಲಾಗುವುದು” ಎಂದು ಶಾಸಕ ಶರಣಗೌಡ ಭರವಸೆ ನೀಡಿದರು.

ಪ್ರಸ್ತುತ ಹೊಸ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಆರಂಭಿಸಲು ಮಾತ್ರ ಇಲಾಖೆ ಅನುಮತಿ ನೀಡಿರುವುದಾಗಿ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಆದರೆ ಈ ಭಾಗದಲ್ಲಿ ಕಲಾ ವಿಭಾಗಕ್ಕೂ ಹೆಚ್ಚಿನ ಬೇಡಿಕೆ ಇರುವುದಾಗಿ ವಿವರಿಸಿದರು.

ತಕ್ಷಣ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ದೂರವಾಣಿ ಕರೆ ಮಾಡಿದ ಶಾಸಕ ಶರಣಗೌಡ, ಕಾಲೇಜಿನಲ್ಲಿ ಕಲಾ ವಿಭಾಗ ಆರಂಭಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಸಚಿವರು ಇದಕ್ಕೆ ಸಕಾರಾತ್ಮಕ ಸ್ಪಂದನೆ ನೀಡಿದರು ಎನ್ನಲಾಗಿದೆ. ಬಳಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರಿಗೆ ಕರೆ ಮಾಡಿ ಕಾಲೇಜಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಿಡಿಪಿಯು ಪಂಡಿತರಾವ್ ಪವಾರ, ಬಿಇಒ ವೀರಣ್ಣ ಕನ್ನಳ್ಳಿ, ಶರಣಗೌಡ ಆಶನಾಳ, ಎಸ್‍ಡಿಎಂಸಿ ಅಧ್ಯಕ್ಷ ವೆಂಕಟರಡ್ಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.